ಬಜಾಲ್: ಮನೆಯಲ್ಲಿ ಆಕಸ್ಮಿಕ ಬೆಂಕಿ; ಅಪಾರ ನಷ್ಟ
ಮಂಗಳೂರು, ಜ.13: ನಗರ ಹೊರವಲಯದ ಬಜಾಲ್ ಪಲ್ಲಕೆರೆಯ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಢ ಸಂಭವಿಸಿವೆ. ಇದರಿಂದ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳ ಸಹಿತ ಸುಮಾರು 18ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಸುಟ್ಟುಕರಕಲವಾಗಿವೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ಬಜಾಲ್ ಪಲ್ಲಕೆರೆ ನಿವಾಸಿ ಲಕ್ಷ್ಮೀನಾರಾಯಣ್ ನಗರದಲ್ಲಿ ಡೆಕೋರೇಷನ್ ವ್ಯವಹಾರ ನಡೆಸುತ್ತಿದ್ದರು. ಇದಕ್ಕೆ ಬಳಕೆ ಮಾಡುವ ಸೊತ್ತುಗಳನ್ನು ಪಲ್ಲಕೆರೆಯ ಮನೆಯ ಮುಂಭಾಗದ ಚಪ್ಪರದಲ್ಲೇ ಇರಿಸಿದ್ದರು. ಶುಕ್ರವಾರ ಸಂಜೆಯ ವೇಳೆಗೆ ಲಕ್ಷ್ಮೀನಾರಾಯಣ್ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದು, ರಾತ್ರಿ 11ಕ್ಕೆ ಮನೆಗೆ ಬೆಂಕಿ ತಗುಲಿದೆ ಎನ್ನಲಾಗಿದೆ.
ಮನೆಯಲ್ಲಿ ಲಕ್ಷ್ಮೀನಾರಾಯಣರ ಪತ್ನಿ ಮಾತ್ರವಿದ್ದು, ಅವರು ನೋಡುವಷ್ಟರಲ್ಲಿ ಮನೆಯ ಮುಂಭಾಗ, ಚಪ್ಪರ ಬೆಂಕಿಗೆ ಆಹುತಿಯಾಗಿತ್ತು. ತಕ್ಷಣ ಅವರು ಬೊಬ್ಬೆ ಹಾಕಿದ್ದು, ವಿಷಯ ತಿಳಿದುಕೊಂಡ ಸಮೀಪದ ಮನೆಯವರು ಮನೆಯೊಳಗಿ ದ್ದವರನ್ನು ರಕ್ಷಣೆ ಮಾಡಿದ್ದಾರೆ.
ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಆದರೂ ಸುಮಾರು 18 ಲಕ್ಷಕ್ಕೂ ಅಧಿಕ ಮೌಲ್ಯದ ಅಲಂಕಾರ ಫೈಬರ್ ಕಂಬಗಳು, ಮಂಟಪ, ಫ್ರೇಮ್‌ಗಳು, ಫೋಮ್ ಫ್ರೇಮ್, ಆರ್ಚ್‌ಗಳು, ಹೂವುಗಳ ಸಹಿತ ಅಲಂಕಾರಿ ಸೊತ್ತುಗಳು, ಮನೆಯ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಬೆಂಕಿ ದುರಂತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ವೇದವ್ಯಾಸ್ ಕಾಮತ್, ಕಾರ್ಪೊರೇಟರ್ ಅಶ್ರಫ್, ಸಂದೀಪ್, ಯುವವಾಹಿನಿ ಜಿಲ್ಲಾಧ್ಯಕ್ಷ ಹರೀಶ್ ಪೂಜಾರಿ, ಕಂಕನಾಡಿ ಗರೋಡಿ ಬಿಲ್ಲವ ಸಮಾಜ ಅಧ್ಯಕ್ಷ ದಿನೇಶ್ ಅಂಚನ್, ಎಪಿಎಂಸಿ ಮಾಜಿ ಸದಸ್ಯ ಭರತೇಶ್ ಅಮೀನ್ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದಾರೆ.