ಕಲ್ಲಡ್ಕ ಪ್ರಭಾಕರ ಭಟ್ ಅವಹೇಳನಕಾರಿ ಹೇಳಿಕೆ ಪ್ರಕರಣ: ಸರಕಾರದ ಧೋರಣೆ ಖಂಡಿಸಿ ವಿಮ್ ಭಿತ್ತಿಪತ್ರ ಪ್ರದರ್ಶನ
ಮಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ನೀಡಿರುವ ಅವಹೇಳನಕಾರಿ ಹೇಳಿಕೆ ಮತ್ತು ಈ ವಿಚಾರದಲ್ಲಿ ರಾಜ್ಯ ಸರಕಾರದ ಧೋರಣೆಯನ್ನು ಪ್ರಚೋದನಕಾರಿ ಭಾಷಣವನ್ನು ಖಂಡಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಭಿತ್ತಿಪತ್ರ ಪ್ರದರ್ಶಿಸಿ ಸೋಮವಾರ ಪ್ರತಿಭಟನೆ ನಡೆಸಿದೆ.
ಕಲ್ಲಡ್ಕ ಪ್ರಭಾಕರ ಭಟ್ ಅವಹೇಳನಕಾರಿಯಾಗಿ ಮಾತನಾಡುವುದು ಇದೇ ಮೊದಲಲ್ಲ. ಹಾಗಾಗಿ ಈತನ ವಿರುದ್ಧ ವಿಮ್ ರಾಜ್ಯದ 21 ಕಡೆಗಳಲ್ಲಿ ದೂರುಗಳನ್ನು ನೀಡಿತ್ತು. ಈತನ ಮೇಲೆ ಎಫ್‌ಐಆರ್ ದಾಖಲಾಗಿದ್ದರೂ ಕೂಡ ಸರಕಾರ ಬಂಧಿಸದೆ ಸಂಪೂರ್ಣ ರಕ್ಷಣೆ ನೀಡಿದೆ. ಈತನ ವಿರುದ್ಧ ನಡೆಸುವ ಪ್ರತಿಭಟನೆಗೆ ಭದ್ರತೆ ಕೋರಿ ಪೊಲೀಸ್ ಠಾಣೆಗೆ ತೆರಳಿದ ವಿಮ್‌ನ ಜಿಲ್ಲಾ ನಾಯಕಿಯರಿಗೆ ಸೆ.107 ರಡಿ ನೋಟಿಸ್ ನೀಡಿ ಅನ್ಯಾಯ ಎಸಗಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ವಿಮ್ ರಾಜ್ಯ ಮಹಿಳಾ ಆಯೋಗ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರನ್ನು ನೀಡಿತ್ತು ಎಂದು ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ