ಕರ್ನಿರೆ ಸುವರ್ಣ ಪ್ರತಿಷ್ಠಾನದಿಂದ ಕಲಾ ಸಾಧಕರಿಗೆ ಸನ್ಮಾನ
ಮಂಗಳೂರು, ಜ.28: ಕರ್ನಿರೆ ಸುವರ್ಣ ಪ್ರತಿಷ್ಠಾನದ ವತಿಯಿಂದ 11ನೇ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ನೆರವಿನೊಂದಿಗೆ ಯಕ್ಷ ಕಲಾರಾಧನೆ ಮತ್ತು ಹಿರಿಯ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕರ್ನಿರೆ ಜಾರಂದಾಯ ದೈವದ ಗಡುವಾಡು ಬಳಿ ಕೊಪ್ಪಳ ತೋಟದಲ್ಲಿ ದುಬೈ ನಿವಾಸಿ ಹವ್ಯಾಸಿ ಯಕ್ಷಗಾನ ವೇಷಧಾರಿ ಪ್ರಭಾಕರ ಡಿ. ಸುವರ್ಣ ಮತ್ತು ಕುಟುಂಬಿಕರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ತಾಳಮದ್ದಳೆ ಅರ್ಥಧಾರಿಗಳಾಗಿ, ವೇಷಧಾರಿಗಳಾಗಿ, ಸಂಘಟಕರಾಗಿ ಪ್ರಸಿದ್ಧರಾದ ಎಂಟು ಮಂದಿ ಸಾಧಕ ಕಲಾವಿದರಾದ ಡಾ.ಎಂ. ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಉಜಿರೆ ಅಶೋಕ ಭಟ್, ಸರಪಾಡಿ ಅಶೋಕ ಶೆಟ್ಟಿ, ಡಿ. ಮನೋಹರ ಕುಮಾರ್, ಶಶಿಕಾಂತ ಶೆಟ್ಟಿ ಕಾರ್ಕಳ, ಸುಮಂಗಲಾ ರತ್ನಾಕರ್ ಅವರನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮಿ ನಾರಾಯಣ ಆಸ್ರಣ್ಣ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ನಿಧಿಯನ್ನು ವಿತರಿಸಲಾಯಿತು. ಯಕ್ಷಗಾನ ಪೋಷಕ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಸಂಘಟಕ ಪದ್ಮನಾಭ ಕಟೀಲು ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಂಘಟಕರಾದ ಗಿರೀಶ್ ಸುವರ್ಣ ದಂಪತಿಯನ್ನು ಗೌರವಿಸಲಾಯಿತು.
ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಡಿ. ಸುವರ್ಣ ಸ್ವಾಗತಿಸಿದರು. ಗೌರವಾಧ್ಯಕ್ಷ ಭುಜಂಗ ಡಿ. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಜನಾರ್ದನ ಅಮ್ಮುಂಜೆ ವಂದಿಸಿದರು.