ಬಜ್ಪೆ: ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ
ಬಜ್ಪೆ: ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ರಿ) ಬಜ್ಪೆ ಕಾಟಿಪಳ್ಳ ಇದರ ವತಿಯಿಂದ 3 ಜೋಡಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬಜ್ಪೆ ಎಂಜೆಎಂ ಜುಮಾ ಮಸೀದಿಯ ವಠಾರದಲ್ಲಿ ರವಿವಾರ ನಡೆಯಿತು.
ನಿಖಾಹ್‌ಗೆ ನೇತೃತ್ವ ನೀಡಿ ಮಾತನಾಡಿದ ಬಜ್ಪೆ ಎಂಜೆಎಂ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮನ್ಸೂರ್ ಸಅದಿ ಅಲ್ ಕಾಮಿಲ್, ಸಮಾಜದ ಬಡವರ್ಗದ ಜನರು, ಶೋಷಿತರು, ನೊಂದವರನ್ನು ಹುಡುಕಿ ತನು ಮನ ಧನದಿಂದ ಸಹಾಯ ಮಾಡುವವರು ದೇವರಿಗೆ ಪ್ರೀಯರಾದವರು. ಒಬ್ಬ ಬಡವನಿಗೆ ಯಾವುದೇ ರೂಪದಲ್ಲಿ ಸಹಾಯ ಮಾಡಿದರೆ ದೇವರು ಅಂತಹಾ ಜನರಿಗೆ ಸ್ವರ್ಗ ಪ್ರವೇಶಕ್ಕೆ ಸಹಾಯ ಮಾಡುವನು ಎಂದು ಪ್ರವಾದಿ ಮುಹಮ್ಮದರು(ಸ.ಅ.) ಭರವಸೆ ನೀಡಿದ್ದಾರೆ. ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ನ ಈ ಕಾರ್ಯವು ಅಲ್ಲಾಹನಿಗೆ ಪ್ರಿಯವಾದ ಕಾರ್ಯವಾಗಿದ್ದು, ಎಲ್ಲಾ ಶ್ರೀಮಂತ ದಾನಿಗಳಿಗೆ ಪ್ರೇರಣೆಯಾಗಲಿ ಎಂದು ಅವರು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜಕ ಮುಹಮ್ಮದ್ ಅಶ್ರಫ್ ಅವರು ಮಾತನಾಡಿ, ನಾನು ಇವತ್ತು ನನ್ನ ಮದುವೆಗಿಂತ ಹೆಚ್ಚು ಖುಷಿಯಾಗಿದ್ದೇನೆ. ಯಾಕೆಂದರೆ ಬಡ ಕುಟುಂಬದ ನನ್ನ ಮೂವರು ಸೋದರಿಯರಿಗೆ ನಾನು ಇಂದು ಮದುವೆ ಮಾಡಿಸುತ್ತಿದ್ದೇನೆ. ಹೆಣ್ಣುಮಕ್ಕಳ ಕುಟುಂಬದ ಕಷ್ಟವನ್ನು ನೋಡಿ ಮದುವೆಯಾಗಲು ಮುಂದೆ ಬಂದಿರುವ ಯುವಕರು ಇತರರಿಗೆ ಆದರ್ಶ. ಇಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಆಯೋಜನೆ ಮಾಡಲಾಗುವುದು. ಇನ್ನೊಬ್ಬರಿಗೆ ಸಹಾಯ ಮಾಡಲು ಹಣವಿದ್ದರೆ ಸಾಲದು, ಮನಸ್ಸೂ ಇರಬೇಕು. ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವಲ್ಲಿ ನಮ್ಮ ಸಮಾಜದ ಇತರರು ಮುಂದೆ ಬರಬೇಕು ಎಂದು ನುಡಿದರು.
ಮಾಜಿ ಸಚಿವ ಮೊಯ್ದೀನ್ ಬಾವ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಿತೇಶ್ ಶೆಟ್ಟಿ, ವಕ್ಪ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಮೊದಲಾದವರು ಮಾತನಾಡಿ ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಮತ್ತು ಅದರ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಅವರ ಸಮಾಜಮುಖಿ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಸುರತ್ಕಲ್ ಮುಸ್ಲಿಮ್ ಐಕ್ಯ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಆಶ್ರಫ್, ಪ್ಯಾರ ಎಂಜೆಎಂ ಮಸೀದಿಯ ಅಧ್ಯಕ್ಷ ಕೆ.ಎಚ್. ಹುಸೈನ್ ಶರೀಫ್, ಬಜ್ಪೆ ಎಂಜೆಎಂ ಅಧ್ಯಕ್ಷ ಅಬ್ದುಲ್ ಖಾದರ್, ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕೆ., ಬಜ್ಪೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸಾಹುಲ್ ಹಮೀದ್, ಎಸ್ ಡಿಪಿಐ ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಉಪಾಧ್ಯಕ್ಷ ಇಸ್ಮಾಯೀಲ್ ಇಂಜಿನಿಯರ್, ನ್ಯೂ ಇಂಡಿಯಾ ಚಾರಿಟೇಬಲ್ (ರಿ) ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಾಲಿ ಬಜ್ಪೆ, ಅತ್ತಾವುಲ್ಲಾ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.