ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ನಾಟೆಕಲ್ ಸಮೀಪದ ಕಲ್ಕಟ್ಟ ಎಂಬಲ್ಲಿನ ಅಬ್ದುಲ್ ಫಯಾನ್ (26) ಮತ್ತು ನರಿಂಗಾನ ಸಮೀಪದ ತೌಡುಗೋಳಿ ಕ್ರಾಸ್ ನಿವಾಸಿ ಮೊಯಿದ್ದೀನ್ ಹಫೀಸ್ ಯಾನೆ ಆಬಿ (47) ಬಂಧಿತ ಆರೋಪಿಗಳು.
ಅಬ್ದುಲ್ ಫಯಾನ್ ಎಂಬಾತನು ಕೊಣಾಜೆ, ಉಳ್ಳಾಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಉಪ್ಪಿನಂಗಡಿ, ಕಡಬ ಪೊಲೀಸ್ ಠಾಣೆಗಳಲ್ಲಿನ ವಿವಿಧ ಕಡೆಗಳಲ್ಲಿ ಸರಕಾರಿ ಕಚೇರಿ, ಶಾಲೆ ಹಾಗೂ ಅಂಗಡಿಗಳಲ್ಲಿ ಕಳ್ಳತನ ಸಹಿತ 23 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ಕಾರಾಗೃಹದೊಳಗೆ ಇತರ ಕೈದಿಗಳಿಗೆ ಹಲ್ಲೆ ನಡೆಸಿದ ಮತ್ತು ಜೈಲು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪವೂ ಇದೆ. ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಈತ ಕಳೆದ 2 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಈತನನ್ನು ಬಂಧಿಸಿದ್ದಾರೆ.
*ಮೊಯಿದ್ದೀನ್ ಹಫೀಸ್ ಯಾನೆ ಆಬಿ ಕೊಣಾಜೆ, ಉಳ್ಳಾಲ, ಬಂದರ್, ಸುರತ್ಕಲ್, ಕಂಕನಾಡಿ ನಗರ ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ/ಸಾಗಾಟ ಸಹಿತ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಈತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಈತನನ್ನು ಮಂಜೇಶ್ವರ ಸಮೀಪದ ಮೀಂಜದಿಂದ ಬಂಧಿಸಲಾಗಿದೆ.
ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್‌ಎಂ, ಎಸ್ಸೈ ಶರಣಪ್ಪ ಭಂಡಾರಿ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.