×
Ad

ಉಪ್ಪಿನಂಗಡಿ: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸಾರ್ವಜನಿಕ ಸಮಾವೇಶ

Update: 2024-02-23 21:26 IST

ಉಪ್ಪಿನಂಗಡಿ: ಧರ್ಮಗ್ರಂಥಗಳಿರುವುದು ಮನುಷ್ಯನ ಪರಿವರ್ತನೆಗಾಗಿ. ಆದರೆ ಇದನ್ನು ಮರೆತಿರುವ ಕೆಲವರಿಂದು ನನ್ನ ಧರ್ಮ, ನನ್ನ ಜಾತಿ, ನನ್ನ ಗುಂಪು ಎಂದು ಶ್ರೇಷ್ಟತೆ ಮೆರೆಯುತ್ತಿದ್ದು ದೇಶದ ಸಮಾನತೆಯನ್ನು ಒಡೆಯುತ್ತಿದ್ದಾರೆ. ಆದ್ದರಿಂದ ನಾವಿಂದು ಇಂತಹ ಶ್ರೇಷ್ಟತೆಯ ವ್ಯಸನಗಳನ್ನು ಕಿತ್ತೊಗೆಯಬೇಕಾಗಿದ್ದು, ಸಮಾಜದಲ್ಲಿ ದ್ವೇಷದ ಗೋಡೆ ಕಟ್ಟುವವರ ಮಧ್ಯೆ ಪ್ರೀತಿ, ಸೌಹಾರ್ದತೆಯ ಸೇತುವೆ ಕಟ್ಟಬೇಕಾಗಿದೆ ಎಂದು ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಉಪ್ಪಿನಂಗಡಿ ಇದರ ವತಿಯಿಂದ `ಬಹುತ್ವದ ಭಾರತ: ಸವಾಲುಗಳು ಮತ್ತು ಪರಿಹಾರ' ವಿಷಯದ ಕುರಿತಾಗಿ ಇಲ್ಲಿನ ಎಚ್.ಎಂ. ಅಡಿಟೋರಿಯಂನ ಹೊರಾಂಗಣದಲ್ಲಿ ಫೆ.23ರಂದು ನಡೆದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.

ಬಹುತ್ವದ ಸಂಸ್ಕೃತಿ ನಮ್ಮ ದೇಶದ್ದಾಗಿದ್ದು, ಸಮಾನತೆಯ ಸಂದೇಶ ಸಾರಿದ ಬಸವಣ್ಣ, ಕನಕದಾಸರು, ಸಂತ ಶಿಶುನಾಳ ಷರೀಫ, ಕುವೆಂಪು, ನಿಸಾರ್ ಅಹಮ್ಮದ್ ಅವರ ನಾಡು ನಮ್ಮದಾಗಿದೆ. ಹಿಂದೂ- ಮುಸ್ಲಿಂ- ಕ್ರೈಸ್ತರು ಒಟ್ಟಾಗಿ ಇದ್ದುದ್ದ ರಿಂದಲೇ ನಮ್ಮ ಹಿರಿಯರು ಶಿಕ್ಷಣವನ್ನು ಪಡೆಯುವಂತಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಂಡು ಬಾರದ ಬೇಧ- ಭಾವ ಬಳಿಕದ ದಿನಗಳಲ್ಲಿ ಮುನ್ನಲೆಗೆ ಬರುತ್ತಿದೆ. ಜಾತಿ- ಧರ್ಮದ ಅಹಂಕಾರ ಕಾಣುತ್ತಿದೆ. ಇಂತಹ ಕಾಲಘಟ್ಟ ದಲ್ಲಿ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಹಳ್ಳಿ- ಗಲ್ಲಿಗಳಿಗೂ ಕೊಂಡೋಗುವ ಕಾರ್ಯವಾಗಬೇಕಿದೆ. ನಮ್ಮ ಧರ್ಮಗಳು ಬೇರೆ ಬೇರೆಯಾಗಿರಬಹುದು, ಪೂಜಿಸುವ ರೀತಿ, ಆಚಾರ- ವಿಚಾರಗಳಲ್ಲಿ ವಿಭಿನ್ನತೆ ಇರಬಹುದು. ಪ್ರಾರ್ಥನೆ ಗಳು ಬೇರೆ ಬೇರೆಯಾಗಿರಬಹುದು ಆದರೆ ಎಲ್ಲರ ಪ್ರಾರ್ಥನೆ ತಲುಪುವ ಶಕ್ತಿ ಮಾತ್ರ ಒಂದೇ ಆಗಿದೆ. ಮಕ್ಬೂಲ್ ಶೇರ್ವಾನಿಯವರ ತ್ಯಾಗ- ಬಲಿದಾನದಿಂದಾಗಿ ಇಂದು ಕಾಶ್ಮೀರ ಭಾರತದ ಭಾಗವಾಗಿರಲು ಸಾಧ್ಯವಾಗಿದೆ. ಬಹುತ್ವದ ಭಾರತವನ್ನು ಕಟ್ಟಲು ಐಕ್ಯತೆಯನ್ನು ಪ್ರೀತಿಸಿದ ಅದೆಷ್ಟೋ ಮಂದಿಯ ತ್ಯಾಗ- ಬಲಿದಾನವಿದೆ. ಆದ್ದರಿಂದ ನಮ್ಮ ಒಗ್ಗಟ್ಟನ್ನು ಮುರಿಯುವುದರ ಬಗ್ಗೆ ಮಾತನಾಡಿದ್ರೆ, ನಮ್ಮ ಒಗ್ಗಟ್ಟನ್ನು ಉಳಿಸುವ ಮಾತುಗಳು ನಮ್ಮದಾಗಿರಲಿ. ಈ ದೇಶ ದಲ್ಲಿ ಸೌಹಾರ್ದತೆಯ ಬೆಳಕನ್ನು ಹೊತ್ತಿಸುವ ಕೈಗಳು ನಮ್ಮದಾಗಲಿ ಎಂದರು.

ಮುಖ್ಯ ಭಾಷಣಕಾರರಾಗಿದ್ದ ಜಮಾಅತೆ ಇಸ್ಲಾಮೀ ಹಿಂದ್‍ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ. ಮುಹಮ್ಮದ್ ಕುಂಞಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಶಕ್ತಿ, ಸೌಂದರ್ಯ, ಗುರುತತೆ ಆಗಿದೆ. ಆದರೆ ಇಂದು ಅದನ್ನು ಕಳೆದು ಕೊಳ್ಳುವ ಆತಂಕ ಬಂದೊದಗಿದೆ. ದ್ವೇಷಪೂರಿತ ಮಾತುಗಳು ಬಾಂಬ್‍ಗಿಂತಲೂ ಅಪಾಯಕಾರಿಯಾಗಿದ್ದು, ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಆದರೆ ಇಂದು ದ್ವೇಷ ಭಾಷಣಗಳು ಸಮಾಜದಲ್ಲಿ ಸ್ಪರ್ಧೆಯ ರೀತಿಯಲ್ಲಿ ನಡೆಯುತ್ತಿವೆ. ಕೆಲವು ರಾಜಕಾರಣಿಗಳಿಗೆ ಸ್ಥಾನಮಾನದ ಅರ್ಹತೆಯೂ ಇದೇ ಆಗಿದೆ. ದ್ವೇಷ ಕಾರುವ ಮನೋಸ್ಥಿತಿಯವರು, ಕೆಟ್ಟ ಕೆಲಸಗಳನ್ನು ಮಾಡುವವರು, ಸಮಾಜದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವವರು, ಸಮಾಜದ ಐಕ್ಯತೆಗೆ ಬೆಂಕಿ ಕೊಡುವವರು ಇಂದು ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಸಮಾಜವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಸಂಸ್ಕಾರ, ಸಂಸ್ಕೃತಿ ಮರೆತು ಬಹುತ್ವವನ್ನು ದುರ್ಬಲಗೊಳಿಸಿ ಆತ್ಮಹತ್ಯೆಯ ಕಡೆಗೆ ದೇಶ ಸಾಗುತ್ತಾ ಇದ್ದು, ಸುಳ್ಳುಗಳ ಮೂಲಕ ಸಾಮ್ರಾಜ್ಯ ಕಟ್ಟುವ ಕೆಲಸ ನಡೆಯುತ್ತಿದೆ. ದ್ವೇಷ, ಹಗೆತನದಿಂದ ನಾಗರಿಕತೆ, ದೇಶ, ಧರ್ಮ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಸಮಾನತೇ, ಭ್ರಾತ್ವತ್ವದ ಕಾವಲುಗಾರರು ನಾವಾಗಬೇಕು. ಧರ್ಮಗಳು ನೀಡುವ ಬೆಳಕು, ಕರು ಣೆಯ ಪಾಠವನ್ನು ಮೈಗೂಡಿಸಿಕೊಂಡು ದ್ವೇಷ, ವೈರತ್ವ ಮರೆತು ಈ ದೇಶದ 140 ಕೋ. ಜನರ ಅಭಿವೃದ್ಧಿಯ ಬಗ್ಗೆ ಚಿಂತಿಸುವವರಾಗಬೇಕು ಎಂದರು.

ಅಬ್ದುಲ್ ಖಾದರ್ ಕುಕ್ಕಿಲ ಅವರ `ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಆರು ಪ್ರಶ್ನೆಗಳು' ಎಂಬ ಕೃತಿ ಅನಾವರಣ ಗೊಳಿಸಿ ಮಾತನಾಡಿದ ಧಾರ್ಮಿಕ ಚಿಂತಕ ಲಕ್ಷ್ಮೀಶ ಗಬಲಡ್ಕ ಮಾತನಾಡಿ, ಪ್ರಶ್ನೆಗಳನ್ನು ವಾಸ್ತವಾಂಶ ತಿಳಿದುಕೊಳ್ಳಲು ಕೇಳಬೇಕೇ ಹೊರತು ಒಬ್ಬರ ವೈಯಕ್ತಿಕ ನಿಂದನೆ, ದ್ವೇಷ ಸಾಧನೆಗಾಗಿ ಕೇಳುವುದು ಸರಿಯಲ್ಲ. ವ್ಯಕ್ತಿಯೋರ್ವ ಮಾಡುವ ತಪ್ಪನ್ನು ಸಮುದಾಯಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಧರ್ಮ ಶೃದ್ಧೆ, ಕರ್ಮ ಶೃದ್ಧೆ, ಶರಣಾಗತಿ ನಾನು ಮುಸ್ಲಿಂ ಸಹೋದರರಲ್ಲಿ ಕಂಡ ಬಹುದೊಡ್ಡ ಗುಣಗಳಾಗಿದ್ದು, ನಾವೆಲ್ಲಾ ಬಹುತ್ವಕ್ಕೆ ತೆರೆದುಕೊಳ್ಳಬೇಕಿದೆ ಎಂದರು.

ವೇದಿಕೆಯಲ್ಲಿ ಬೋಳಂಗಡಿಯ ಹವ್ವಾ ಜುಮಾ ಮಸೀದಿಯ ಖತೀಬ್ ಸೈಯ್ಯದ್ ಯಹ್ಯಾ ತಂಙಳ್ ಮದನಿ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪುತ್ತೂರು ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಝೇವಿಯರ್ ಡಿಸೋಜ, ಜಮಾಅತೆ ಇಸ್ಲಾಮೀ ಹಿಂದ್ ಉಪ್ಪಿನಂಗಡಿ ಇದರ ಅಧ್ಯಕ್ಷ ಅಬ್ದುಲ್ ಹಸೀಬ್, ಸಮ್ಮೇಳನದ ಸಂಚಾಲಕ ಅಬ್ದುಲ್ ರವೂಫ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಪ್ರಮುಖರಾದ ಅಝೀಝ್ ಬಸ್ತಿಕ್ಕಾರ್, ಶಬೀರ್ ಕೆಂಪಿ, ತೌಸೀಫ್ ಯು.ಟಿ., ಅಬ್ದುರ್ರಹ್ಮಾನ್ ಯುನಿಕ್, ಕರುಣಾಕರ, ಇಸ್ಮಾಯೀಲ್ ಇಕ್ಬಾಲ್, ನವೀನ್ ಬ್ರಾಗ್ಸ್, ಅಸ್ಕರ್ ಅಲಿ, ಸಿದ್ದೀಕ್ ಕೆಂಪಿ,

ಜಮಾಅತೆ ಇಸ್ಲಾಮೀ ಹಿಂದ್‍ನ ಮಂಗಳೂರು ವಲಯದ ಉಪಸಂಚಾಲಕ ಅಮೀನ್ ಅಹ್ಸನ್ ಸ್ವಾಗತಿಸಿದರು. ಮುಹಮ್ಮದ್ ಮುಸ್ತಈನ್ ಕುರ್‍ಆನ್ ಪಠಿಸಿದರು. ಸುಹೈಲ್ ಮುಹಮ್ಮದ್ ಮತ್ತು ಇಶಾಂ ಸೌಹಾರ್ದ ಗೀತೆ ಹಾಡಿದರು. 34 ನೆಕ್ಕಿಲಾಡಿ ಮಸ್ಜಿದುಲ್ ಹುದಾದ ಅಧ್ಯಕ್ಷ ಜಲೀಲ್ ಮುಕ್ರಿ ವಂದಿಸಿದರು. ಜಲೀಲ್ ಮುಕ್ರಿ ಹಾಗೂ ಅಸ್ಲಮ್ ಪಂಜಳ ಕಾರ್ಯಕ್ರಮ ನಿರೂಪಿಸಿದರು.











 


 


 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News