×
Ad

ಗೇರು ನಿಗಮಕ್ಕೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ ಆಯ್ಕೆ

Update: 2024-02-29 21:55 IST

ಮಮತಾ ಗಟ್ಟಿ, ಸದಾಶಿವ ಉಳ್ಳಾಲ

ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಅವರಿಗೆ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (ಮೂಡಾ) ಸ್ಥಾನ ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಸದಾಶಿವ ಉಳ್ಳಾಲ ಅವರಿಗೆ ಒಲಿದು ಬಂದಿದೆ.

ಇಬ್ಬರೂ ಕೂಡಾ ಉಳ್ಳಾಲ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟವರು ಎನ್ನುವುದು ವಿಶೇಷ.

ಮುಡಿಪು ಕೈರಂಗಳದ ಮಮತಾ ಗಟ್ಟಿ ಅವರು ಬಿ.ಎ.ಪದವೀಧರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಮಮತಾ ಗಟ್ಟಿ ಅವರು 1999ರಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಾಳೆಪುಣಿ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ರಂಗಕ್ಕೆ ಕಾಲಿರಿಸಿದ್ದರು. ಬಳಿಕ ಅವರು ತಾ.ಪಂ ಉಪಾಧ್ಯಕ್ಷರಾದರು. ಸತತ 3 ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಜಯ ಗಳಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ದ್ದರು. ಕಳೆದ 25 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಮತಾ ಗಟ್ಟಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ್ದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ 12 ವರ್ಷ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿಯಾಗಿ, ಇದೀಗ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಕೈರಂಗಳ ಮತ್ತು ನರಿಂಗಾನದಲ್ಲಿ ಶಾಲಾ ಶಿಕ್ಷಣ, ಮುಡಿಪುವಿನಲ್ಲಿ ಪಿಯುಸಿ ಮತ್ತು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಕಲಾ ಪದವಿ ಪಡೆದಿದ್ದಾರೆ. ತಂದೆ ಸಂಜೀವ ಗಟ್ಟಿ ಅವರ ಪ್ರೇರಣೆಯಿಂದ ರಾಜಕೀಯ ರಂಗಕ್ಕೆ ಇಳಿದ ಮಮತಾ ಗಟ್ಟಿ ಅವರ ಪತಿ ಸದಾಶಿವ ಗಟ್ಟಿ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿದ್ದಾರೆ. ಪುತ್ರ ಮೆಕ್ಯಾನಿಕಲ್ ಎಂಜಿನಿಯರ್. ಪುತ್ರಿ ಬಿ.ಕಾಂ ಅಂತಿಮ ಪದವಿ ವಿದ್ಯಾರ್ಥಿನಿ.

ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್‌ನ ನಿಷ್ಠಾಂತ ಕಾರ್ಯಕರ್ತರಾಗಿರುವ ಸದಾಶಿವ ಉಳ್ಳಾಲ ವೃತ್ತಿಯಲ್ಲಿ ವಕೀಲರು. ಉಳ್ಳಾಲ ತಾಲೂಕಿನ ಕೊಲ್ಯ ನಿವಾಸಿ ಆಗಿರುವ ಅವರು ಗ್ರಾಪಂ ಮತ್ತು ಬೂತ್ ಮಟ್ಟದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ವಿದ್ಯಾರ್ಥಿ ಕಾಂಗ್ರೆಸ್ ಎನ್‌ಎಸ್‌ಯುಐ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ.

ಸದಾಶಿವ ಉಳ್ಳಾಲ ಅವರ ಪುತ್ರ ವಕೀಲರಾಗಿದ್ದು, ಪುತ್ರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಸದಾಶಿವ ಉಳ್ಳಾಲ ಅವರು ಶುಕ್ರವಾರ ಮೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಮತಾ ಗಟ್ಟಿ ಅವರು ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News