ಭಕ್ತಿ, ಪ್ರೀತಿ ಪೂರ್ವಕ ಸೇವೆ ಮುಖ್ಯ: ಮಂಗಳೂರು ಬಿಷಪ್
ಮಂಗಳೂರು: ಕ್ರೈಸ್ತರ ತಪಸ್ಸು ಕಾಲದ (ಕಪ್ಪುದಿನ)ಆಚರಣೆಯ ಸಮಯದಲ್ಲಿ ಪವಿತ್ರ ಗುರುವಾರದಂದು ಯೇಸು ಕ್ರಿಸ್ತ ತನ್ನ 12 ಶಿಷ್ಯರ ಪಾದ ತೊಳೆಯುವ ಮೂಲಕ ಸರಳತೆಯನ್ನು ಮೆರೆದ ನೆನಪಿಗಾಗಿ ಇಂದು ‘ಪವಿತ್ರ ಗುರುವಾರ’ ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಸಂಜೆ ಹೊತ್ತು ಪವಿತ್ರ ಗುರುವಾರದ ಆಚರಣೆಯಲ್ಲಿ ಯೇಸುವಿನ ಕೊನೆಯ ಭೋಜನದ ವಿಧಿವಿಧಾನಗಳು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಸುಳ್ಯ ತಾಲೂಕಿನ ಬೆಳ್ಳಾರೆಯ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆಗಳಿಗೆ ಚಾಲನೆ ನೀಡಿದರು.
ಯೇಸು ಸ್ವಾಮಿ ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಲೋಕಕ್ಕೆ ಪ್ರೀತಿ, ಮಾನವೀಯತೆ, ವಿನಯಶೀಲತೆ, ಸೇವೆ ಇತ್ಯಾದಿ ಮಾನವೀಯ ಮೌಲ್ಯಗಳನ್ನು ಸಾರಿದರು. ಕ್ರಿಸ್ತರು ಹೇಳಿದುದನ್ನು ಅವರ ಅನುಯಾಯಿಗಳಾದ ನಾವೆ ಲ್ಲರೂ ಭಕ್ತಿಪೂರ್ವಕವಾಗಿ ಪಾಲಿಸಬೇಕಾಗಿದೆ. ಭಕ್ತಿ ಮತ್ತು ಪ್ರೀತಿಪೂರ್ವಕವಾಗಿ ಸೇವೆ ಮಾಡುವುದು ಮುಖ್ಯವಾಗಿದೆ ಎಂದು ಬಿಷಪ್ ತನ್ನ ಸಂದೇಶದಲ್ಲಿ ತಿಳಿಸಿದರು.
ಈ ಸಂದರ್ಭ ಬೆಳ್ಳಾರೆ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ಫಾ.ಆ್ಯಂಟನಿ ಪ್ರಕಾಶ್ ಮೊಂತೇರೊ, ಪಂಜ ಚರ್ಚಿನ ಪ್ರಧಾನಗುರು ಫಾ.ಅಮಿತ್ ರೊಡ್ರಿಗಸ್ ಉಪಸ್ಥಿತರಿದ್ದರು.
*ಮಾ.29ರಂದು ಶುಭ ಶುಕ್ರವಾರದಂದು ಶಿಲುಬೆಯ ಹಾದಿ, ಪ್ರವಚನ ಜತೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಮಾ.30ರಂದು ಯೇಸುವಿನ ಪುನರುತ್ಥಾನದ ಜಾಗರಣೆ ಹಾಗೂ ಮಾ.31 ರಂದು ಈಸ್ಟರ್ ಹಬ್ಬದ ಆಚರಣೆಗಳು ನಡೆಯಲಿದೆ.