×
Ad

ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ರಂಗಗಳ ಸಾಧಕ ಕುಕ್ಕುವಳ್ಳಿ : ಡಾ. ಪ್ರಭಾಕರ ಜೋಶಿ

Update: 2024-05-25 18:10 IST

ಮಂಗಳೂರು, ಮೇ 25: ವ್ಯಕ್ತಿಯೊಬ್ಬ ತನ್ನ ಸಾಧನೆಯ ಬಲದಿಂದ ದೊಡ್ಡ ಶಕ್ತಿಯಾಗುತ್ತಾನೆ. ಭಾಸ್ಕರ ರೈಕುಕ್ಕುವಳ್ಳಿ ಕೇವಲ ಯಕ್ಷಗಾನಕ್ಕಾಗಿ ಸೀಮಿತರಾಗದೆ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ, ಕವಿ, ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ ವಿಶೇಷ ಸಾಧನೆ ಮಾಡಿದ ಸಾಹಸಿಯಾಗಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ 30 ಕೃತಿಗಳನ್ನು ಹೊರತಂದ ಪ್ರಬುದ್ಧ ಲೇಖಕರಾಗಿದ್ದಾರೆ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.

ನಿವೃತ್ತ ಪ್ರಾಧ್ಯಾಪಕ, ಸಾಹಿತಿ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಱಬಿಲ್ವಶ್ರೀ’ ಸಭಾಂಗಣದಲ್ಲಿ ಕ್ಷೇತ್ರದ ಪತ್ತನಾಜೆ ಉತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಏರ್ಪಡಿಸಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶ ವಿದೇಶಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಕರಾವಳಿಯ ಸಾಂಸ್ಕೃತಿಕ ಹರಿಕಾರರಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾದ ಭಾಸ್ಕರ ರೈ ನಿರಂತರ ಕ್ರಿಯಾಶೀಲರಾಗಿರುವ ವಿಶಿಷ್ಟ ಪ್ರತಿಭಾವಂತ. ವಿವಿಧ ಮಾಧ್ಯಮ ಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ’ ಎಂದು ಶ್ಲಾಘಿಸಿದರು.

ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಎನ್. ಸಂಜೀವ ರೈ ಅಭಿನಂದನಾ ಭಾಷಣ ಮಾಡಿದರು.

ಪುತ್ತೂರು ಶಿವ ಬ್ರಾಹ್ಮಣ ಸ.ಸೇ. ಸಂಘದ ನಿರ್ದೇಶಕ ಬೆಟ್ಟಂಪಾಡಿ ಅಶೋಕ ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ಪರ್ಲಡ್ಕದ ಎಸ್‌ಡಿಪಿ ರೆಮಿಡೀಸ್ ಆ್ಯಂಡ್ ರೀಸರ್ಚ್ ಸೆಂಟರ್ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಿದರು.

ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಕುಂಚಿನಡ್ಕ, ಕಲಾಪೋಷಕ ಜನಾರ್ದನ ರಾವ್ ಬೆಟ್ಟಂಪಾಡಿ ಅವರನ್ನು ಸಪತ್ನಿಕರಾಗಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಹಿರಿಯ ಸದಸ್ಯ ಬಿ.ವಿಷ್ಣು ರಾವ್ ಸನ್ಮಾನ ಪತ್ರ ವಾಚಿಸಿದರು.

ಬೆಟ್ಟಂಪಾಡಿ ನವೋದಯ ವಿದ್ಯಾ ಸಮಿತಿ ಅಧ್ಯಕ್ಷ ಡಿ.ಎಂ .ಬಾಲಕೃಷ್ಣ ಭಟ್ ಘಾಟೆ, ಪ್ರಗತಿಪರ ಕೃಷಿಕ ಎಂ. ಮುತ್ತಣ್ಣ ಶೆಟ್ಟಿ ಚೆಲ್ಯಡ್ಕ ಅತಿಥಿಗಳಾಗಿದ್ದರು.ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಸಂಘದ ಹಿರಿಯ ಸದಸ್ಯ ಬಿ.ವೆಂಕಟ್‌ರಾವ್, ಕೋಶಾಧಿಕಾರಿ ಶ್ಯಾಮ್‌ಪ್ರಸಾದ್ ಎಂ. ಉಪಸ್ಥಿತರಿದ್ದರು.

ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಐ.ಗೋಪಾಲಕೃಷ್ಣ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ರೈ ಕೇಕನಾಜೆ ವರದಿ ವಾಚಿಸಿದರು. ಪತ್ರಕರ್ತ ಉಮೇಶ್ ಮಿತ್ತಡ್ಕ ವಂದಿಸಿದರು. ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News