ಹಳೆಕೋಟೆ ಶಾಲೆಯಲ್ಲಿ ಮುಖ್ಯ ಶಿಕ್ಷಕರು, ದರ್ಗಾ ಪದಾಧಿಕಾರಿಗಳಿಗೆ ಸನ್ಮಾನ
ಉಳ್ಳಾಲ: ಯಾವುದೇ ಹುದ್ದೆಗಿಂತಲೂ ಶಿಕ್ಷಕ ಹುದ್ದೆ ಎನ್ನುವ ಅತ್ಯುನ್ನತ, ದೇಶದ ಪ್ರಜೆಗಳನ್ನು ಸತ್ಪ್ರಜೆಗಳನ್ನಾಗಿಸಿ ಸುಂದರ ದೇಶ ನಿರ್ಮಾಣ ಜವಾಬ್ದಾರಿ ಶಿಕ್ಷಕರ ಮೇಲಿದೆ. ನೂತನ ಆಡಳಿತ ವ್ಯವಸ್ಥೆ ಬಂದ ಬಳಿಕ ಶಾಲೆ, ಮದ್ರಸಾ ಶಿಕ್ಷಕರ ವೇತನ ಸಮಯಕ್ಕೆ ಸರಿಯಾಗಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಅಭಿಪ್ರಾಯಪಟ್ಟರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನ ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕರ ಸಂಘ 'ಸಮಚ' ವತಿಯಿಂದ ಹಳೆಕೋಟೆ ಯಲ್ಲಿರುವ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಜೀವನ ಕೌಶಲ್ಯ ತರಬೇತುದಾರೆ ವೆರ್ನಾ ಜೋಶ್ನಾ ಮಾತನಾಡಿ, ಶಾಲೆಗೆ ಬರುವ ಮಕ್ಕಳಲ್ಲಿ ಹಲವರು ತೀರಾ ಬಡತನ, ಕಲಿಕೆಯಲ್ಲಿ ಹಿಂದುಳಿದಿರುತ್ತಾರೆ. ಯಾರ ಬಗ್ಗೆಯೂ ತುಚ್ಛವಾಗಿ ಮಾತನಾಡದೆ ಸಮಾನವಾಗಿ ಕಾಣುವ ಗುಣ ಶಿಕ್ಷಕರಲ್ಲಿರಬೇಕು ಎಂದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್. ಮಾತನಾಡಿ, ಮುಂದಿನ ದಿನಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೂ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಚಾರಿಟೇಬಲ್ ಟ್ರಸ್ಟ್ ಅಧೀನದ ಶಾಲೆಯಲ್ಲಿ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರಾದ ಸಂಗೀತ, ನಸೀಮಾ ಬಾನು, ದರ್ಗಾ ಮತ್ತು ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಜೀವನ ಕೌಶಲ್ಯ ತರಬೇತುದಾರೆ ವೆರ್ನಾ ಜೋಶ್ನಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಬಿ.ಮಹಮ್ಮದ್.ತುಂಬೆ, ದರ್ಗಾ ಉಪಾಧ್ಯಕ್ಷ ಯು.ಹಸೈನಾರ್, ಕೋಶಾಧಿಕಾರಿ ನಾಝಿಂ, ಜತೆ ಕಾರ್ಯದರ್ಶಿಗಳಾದ ಮಹಮ್ಮದ್ ಇಸ್ಹಾಕ್, ಮುಸ್ತಫಾ ಕುತ್ತಾರ್, ಲೆಕ್ಕ ಪರಿಶೋಧಕ ಫಾರೂಕ್ ಯು.ಎಚ್., ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಮ್ತಿಯಾಝ್, ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ಫಾರೂಕ್ ಅಬೂಬಕ್ಕರ್ ಉಳ್ಳಾಲ‌್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೋಹನ್, ಶಿಕ್ಷಣ ಪ್ರೇಮಿ ಅಲ್ತಾಫ್ ಯು.ಎಚ್., ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ವಿಶ್ವರಾಜ್, ಇಮ್ತಿಯಾಝ್, ಗೀತಾ ಶೆಟ್ಟಿ, ರಮ್ಲತ್, ರಸೂಲ್ ಖಾನ್ ಮೊದಲಾ ದವರು ಉಪಸ್ಥಿತರಿದ್ದರು.
ಹಳೆಕೋಟೆ ಶಾಲೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಕಲ್ಲಾಪು ಶಾಲೆಯ ಮುಖ್ಯ ಶಿಕ್ಷಕಿ ನಸೀಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪವಿತ್ರ ವಂದಿಸಿದರು. ಟಿಪ್ಪು ಸುಲ್ತಾನ್ ಪದವಿ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.