ದಿವಂಗತ ಭಾಸ್ಕರ್. ಎಂ ಒಂದು ನೆನಪು ಕಾರ್ಯಕ್ರಮ
ಮಂಗಳೂರು: ದಲಿತ ಚಳವಳಿಯ ಹಿರಿಯ ನಾಯಕ,ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರೂ ಆಗಿದ್ದ ದಿವಂಗತ ಭಾಸ್ಕರ್. ಎಂ. ಇವರ ಪರಿನಿಬ್ಬಾಣ ದಿನದ ನೆನಪಿನೊಂದಿಗೆ ಸಾಮಾಜಿಕ ಚಳವಳಿಯೊಂದಿಗೆ ದಿ.ಭಾಸ್ಕರ್. ಎಂ.-ಒಂದು ನೆನಪು ಕಾರ್ಯಕ್ರಮ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ -ದ. ಕ.ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ಎನ್‌ಜಿಒ ಡಿ ‘ಗ್ರೂಪ್ ನೌಕರರ ಭವನದಲ್ಲಿ ನಡೆಯಿತು.
ದಿ.ಭಾಸ್ಕರ್. ಎಂ. ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ದಲಿತ ಹಕ್ಕುಗಳ ನಾಗರೀಕ ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಕುಮಾರ್ ಅವರು ದಿ.ಭಾಸ್ಕರ್.ಎಂ ಈ ಜಿಲ್ಲೆಯಲ್ಲಿ ಸಂಘಟನೆಯ ಆರಂಭಿಕ ಹಂತದಿಂದಲೂ ತಳ ಮಟ್ಟದ ಕಾರ್ಯಕರ್ತರಾಗಿ, ಹಳ್ಳಿ ಹಳ್ಳಿಗೆ ಸಂಚರಿಸಿ ಹಂತ ಹಂತವಾಗಿ ಸಂಘಟನೆಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ಕಡಿಮೆ ವಿದ್ಯಾಭ್ಯಾಸ ಇದ್ದರೂ ತನ್ನ ಅಪಾರ ಬುದ್ಧಿ ಶಕ್ತಿ, ಜ್ಞಾನದಿಂದ ಜನರಲ್ಲಿ ಸಂಘಟನೆಯ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸಂಘಟನೆಯನ್ನು ಕಟ್ಟುವಲ್ಲಿ ಅವರ ಶ್ರಮವನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಜಿಲ್ಲಾ ಸಂಚಾಲಕ ರಘು. ಕೆ. ಎಕ್ಕಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಸಂಘಟನೆಯನ್ನು ಕಟ್ಟಿ ಬೆಳೆಸು ವಲ್ಲಿ ಹಲವಾರು ನಾಯಕರ ತ್ಯಾಗ, ಪರಿಶ್ರಮವಿದೆ. ಅವರಲ್ಲಿ ಹಲವಾರು ಮಂದಿ ಇಂದು ನಮ್ಮ್ಮೊಂದಿಗಿಲ್ಲ, ಆದರೆ ಸಂಘಟನೆಗೆ ಅವರು ಕೊಟ್ಟ ಕೊಡುಗೆ,ತ್ಯಾಗ,ಪರಿಶ್ರಮವನ್ನು ಮುಂದಿನ ನಮ್ಮ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ವೇದಿಕೆಯಲ್ಲಿ ದ. ಸಂ. ಸ. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ,ಜಿಲ್ಲಾ ಸಂಘಟನಾ ಸಂಚಾಲಕರಾದ ಲಕ್ಷ್ಮಣ್ ಕಾಂಚನ್, ಕರಂಬಾರು ಗ್ರಾಮ ಸಂಚಾಲಕ ರುಕ್ಕಯ್ಯ ಕರಂಬಾರ್, ಜೀವ ನಿಧಿ ಟ್ರಸ್ಟ್ ಬಜ್ಪೆ ಇದರ ನಿರ್ದೇಶಕ ಜಯಂತ್, ಭಾಸ್ಕರ್ ಅವರ ಮಗ ಹರೀಶ್. ಎಂ.ಬಿ., ಮಗಳು ತಾರಾ. ಎಂ.ಬಿ. ಭಾಸ್ಕರ್. ಎಂ. ಬಗ್ಗೆ ಮಾತನಾಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ರಾಜಯ್ಯ ಮಂಗಳೂರು,ಕಮಲಾಕ್ಷ ಬಜಾಲ್,ಬಾಲು ಕುಂದರ್, ನಾಗೇಶ್ ಚಿಲಿಂಬಿ, ರಾಮದಾಸ್ ಮೇರೆಮಜಲು, ದಲಿತ ಕಲಾ ಮಂಡಳಿ ಸಂಚಾಲಕ ಸಂಕಪ್ಪ ಕಾಂಚನ್, ತಾಲೂಕು ಸಂಘಟನಾ ಸಂಚಾಲಕ ರವಿ ಪೇಜಾವರ, ಕೃಷ್ಣ. ಕೆ. ಎಕ್ಕಾರು, ದೊಂಬಯ್ಯ ಕಟೀಲು,ಗೀತಾ ಕರಂಬಾರು, ಸೀತಾ ಪೇಜಾವರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ದಲಿತ ಕಲಾ ಮಂಡಳಿ ವತಿಯಿಂದ ದಿವಂಗತ ಭಾಸ್ಕರ್. ಎಂ. ಇವರ ಸಂಘಟನೆಯ ವಿಚಾರದ ಕ್ರಾಂತಿ ಗೀತೆ ಯನ್ನು ಹಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷ್ಣ. ಕೆ. ಎಕ್ಕಾರು ಕಾರ್ಯಕ್ರಮ ನಿರ್ವಹಿಸಿ, ರವಿ ಪೇಜಾವರ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಮೇ 30 ರಂದು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಹಾಸನ ಚಲೋ ಕಾರ್ಯಕ್ರಮದ ಪೋಸ್ಟರ್‌ನ್ನು ಬಿಡುಗಡೆಗೊಳಿಸಿ ಬೆಂಬಲ ಸೂಚಿಸಲಾಯಿತು.