ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು, ಜೂ.24: ದ.ಕ.ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸಹಿತ ಹಲವಡೆ ಸೋಮವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಬಳಿಕ ಮೋಡಕವಿದ ವಾತಾವರಣ ಕಂಡುಬಂದಿದೆ. ಸಂಜೆ ವೇಳೆ ಅಲ್ಲಲ್ಲಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಕೆಲವು ಕಡೆಗಳಲ್ಲಿ ಮರ, ಕೊಂಬೆಗಳು ಮುರಿದು ಬಿದ್ದಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜೂ.25, 26ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಸಮುದ್ರದಿಂದ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ತಿಳಿಸಿದೆ.
ಸೋಮವಾರ ಬೆಳಗ್ಗಿನವರೆಗೆ ಮಂಗಳೂರು ಹಾಗೂ ಮೂಲ್ಕಿಯಲ್ಲಿ ಗರಿಷ್ಠ ತಲಾ 23.8 ಮಿಮೀ ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 22.5 ಮಿ.ಮೀ. ಆಗಿದೆ. ಬೆಳ್ತಂಗಡಿ 21.2 ಮಿ.ಮೀ, ಬಂಟ್ವಾಳ 23.2 ಮಿ.ಮೀ, ಪುತ್ತೂರು 20.1 ಮಿ.ಮೀ, ಸುಳ್ಯ 21.1 ಮಿ.ಮೀ, ಮೂಡುಬಿದಿರೆ 20.1 ಮಿ.ಮೀ, ಕಡಬ 20.6 ಮಿ.ಮೀ, ಉಳ್ಳಾಲ 20.1 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ದಿನದ ಗರಿಷ್ಠ ತಾಪಮಾನ 30.1 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮಂಗಳೂರು ಮನಪಾ ಕಂಟ್ರೋಲ್ ರೂಂ ಸ್ಥಾಪನೆ
ದ.ಕ.ಜಿಲ್ಲಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಅನೀರಿಕ್ಷಿತ ಅನಾಹುತ ಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪ್ರಾಕೃತಿಕ ವಿಕೋಪದ ಸಮಸ್ಯೆಗಳಿಗೆ ಪಾಲಿಕೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಅದರಂತೆ ದೂ.ಸಂ: 0824-2220306 ಅಥವಾ ವಾಟ್ಸ್‌ಆ್ಯಪ್ ಸಂಖ್ಯೆ 9449007722ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.