×
Ad

ನೀಟ್ ವ್ಯವಸ್ಥೆಯಿಂದ ಹೊರಬರಲು ರಾಜ್ಯಕ್ಕೆ ಅವಕಾಶ ನೀಡಲು ಐವನ್ ಡಿಸೋಜ ಆಗ್ರಹ

Update: 2024-06-29 18:15 IST

ಮಂಗಳೂರು: ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ನಡೆದ ಅವ್ಯವಹಾರ, ಅಕ್ರಮದಿಂದ ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಅವರ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮವೂ ಬೀರಿದೆ. ಸುಪ್ರೀಂ ಕೋರ್ಟ್‌ಗೆ ಉತ್ತರಿಸಲು ಕೇಂದ್ರ ಸರಕಾರವು ವಿಫಲವಾಗಿದೆ. ನೀಟ್ ಪರೀಕ್ಷೆಯು ನೀಟಾಗಿ ನಡೆಯಬೇಕಿದೆ. ವಿದ್ಯಾರ್ಥಿಗಳ ಹಿತ ಕಾಪಾಡಬೇಕಿದೆ. ಹಾಗಾಗಿ ಈ ವ್ಯವಸ್ಥೆಯಿಂದ ಹೊರಗೆ ಬರಲು ರಾಜ್ಯಕ್ಕೆ ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀಟ್ ವಿರುದ್ಧ ಕಾಂಗ್ರೆಸ್ ಸಹಿತ ವಿಪಕ್ಷಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಸಂಸತ್ತಿನೊಳಗೆ ಚರ್ಚಿಸಲು ಅವಕಾಶ ನೀಡುತ್ತಿಲ್ಲ. ನೀಟ್ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸರಕಾರ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಕೇಂದ್ರ ಸರಕಾರದ ನಿರ್ಲಕ್ಷ್ಯದಿಂದಲೇ ಇದೆಲ್ಲಾ ಆಗಿದೆ. ಇದರಿಂದ ನೊಂದ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ನೋಡುತ್ತಿದ್ದಾರೆ. ಹಾಗಾಗಿ ನೀಟ್ ಪರೀಕ್ಷೆಯಿಂದ ರಾಜ್ಯ ಸರಕಾರ ಹೊರಗೆ ಬರಲೇಬೇಕು ಕೇಂದ್ರ ಸರಕಾರವು ಅದಕ್ಕೆ ಅವವಕಾಶ ಕಲ್ಪಿಸಬೇಕು ಎಂದರು.

*ಸ್ಥಳಾಂತರಕ್ಕೆ ಸಿದ್ಧರಾಗಿ: ಪ್ರಾಕೃತಿಕ ವಿಕೋಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ಅಪಾಯಕಾರಿ ಜಾಗ ದಲ್ಲಿ ಮನೆ ಮಾಡಿಕೊಂಡವರು ಮಳೆಗಾಲದಲ್ಲಿ ಸ್ಥಳಾಂತರಕ್ಕೆ ಸಿದ್ಧರಾಗಬೇಕು. ಆ ಮೂಲಕ ಪ್ರಾಣ ಹಾನಿ ತಪ್ಪಿಸಲು ಸರಕಾರದ ಜೊತೆ ಕೈ ಜೋಡಿಸಬೇಕು ಎಂದು ಐವನ್ ಡಿಸೋಜ ಮನವಿ ಮಾಡಿದ್ದಾರೆ.

ಪ್ರಾಕೃತಿಕ ವಿಕೋಪ ನಡೆದ ಕಡೆಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸಮರೋಪಾದಿ ಯಲ್ಲಿ ಕೆಲಸ ಮಾಡುತ್ತಿವೆ. ತುರ್ತು ಪರಿಹಾರಕ್ಕೆ ಜಿಲ್ಲಾ ಖಜಾನೆಯಲ್ಲಿ 17 ಕೋ.ರೂ. ಇದೆ. 9 ತಾಲೂಕು ಖಜಾನೆಗಳಲ್ಲಿ ತಲಾ 50 ಲ.ರೂ. ಗಿಂತಲೂ ಅಧಿಕ ಹಣವಿದೆ. ಜಿಲ್ಲಾ, ತಾಲೂಕು ಮಾತ್ರವಲ್ಲ ಗ್ರಾಮಮಟ್ಟದಲ್ಲೂ ತಂಡವು ಸರ್ವ ಸನ್ನದ್ಧ ವಾಗಿದೆ. ಜುಲೈ ೫ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಲಿದ್ದಾರೆ ಎಂದು ಐವನ್ ಡಿಸೋಜ ಹೇಳಿದರು.

*ಮೆಸ್ಕಾಂ ಕಾರ್ಯವೈಖರಿಗೆ ಅಸಮಾಧಾನ: ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿಯೇ ಒಂದೇ ದಿನ ಜಿಲ್ಲೆಯಲ್ಲಿ ಮೂರು ಮಂದಿ ಪ್ರಾಣ ಕಳಕೊಳ್ಳುವಂತಾಗಿದೆ. ಮೆಸ್ಕಾಂ ಮುನ್ನೆಚ್ಚ ರಿಕೆ ವಹಿಸಿಕೊಂಡಿದ್ದರೆ ಈ ಮೂವರ ಪ್ರಾಣ ಉಳಿಸಬಹುದಿತ್ತು. ಘಟನೆ ನಡೆದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುಂಚೆಯೇ ಸಿದ್ಧತೆ ನಡೆಸಬೇಕಿತ್ತು ಎಂದು ಐವನ್ ಡಿಸೋಜ ಮೆಸ್ಕಾಂ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರಾದ ವಿಕಾಸ್ ಶೆಟ್ಟಿ, ಆಸ್ಟಿನ್ ಡಿಕುನ್ಹಾ, ಕೆ. ಭಾಸ್ಕರ ರಾವ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News