×
Ad

ತುರ್ತು ಚಿಕಿತ್ಸೆ ಸಂದರ್ಭ ವೈದ್ಯರು ಸಾಮಾನ್ಯ ತನಿಖೆಗೆ ಹೆಚ್ಚಿನ ಒತ್ತು ನೀಡಿ: ಡಾ. ಸೀತಾರಾಮ ರಾವ್

Update: 2024-06-29 18:58 IST

ಕೊಣಾಜೆ: ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಅಧೀನದ ನಾಟೆಕಲ್ ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆರ್ಥೊಪೆಡಿಕ್ಸ್ ವಿಭಾಗದ ಆಶ್ರಯದಲ್ಲಿ 'ಪೆಲ್ವಿಆಸಿಟಾಬ್ಯುಲರ್ ಟ್ರಾಮ' ಕುರಿತ ನಿರಂತರ ಕಲಿಕಾ ಶಿಕ್ಷಣ ಕಾರ್ಯಾಗಾರದ ಉದ್ಘಾಟನೆಯು ಆಸ್ಪತ್ರೆ ಆಡಿಟೋರಿಯಂನಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಂಸಿ ಮಂಗಳೂರಿನ ಆರ್ಥೊಪೆಡಿಕ್ ವಿಭಾಗ ಹಿರಿಯ ವೈದ್ಯ ಡಾ. ಸೀತಾರಾಮ ರಾವ್ ಅವರು, ಅಪಘಾತಗಳು ಹಾಗೂ ತುರ್ತು ಚಿಕಿತ್ಸೆ ಸಂದರ್ಭ ರೋಗಿಗಳ ಸಾಮಾನ್ಯ ತನಿಖೆ ಪ್ರಮುಖ ಪಾತ್ರ ವಹಿಸುತ್ತದೆ. ತನಿಖೆಗಳು ಸೂಕ್ತ ರೀತಿಯಲ್ಲಿ ಆಗದ ಸಂದರ್ಭ ರೋಗಿಗಳ ಶುಶ್ರೂಷೆಯೂ ವಿಫಲಗಳಾಗುವ ಸಾಧ್ಯತೆಗಳೇ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಅಪಘಾತದ ಸಂದರ್ಭ ಹಲವು ಗಾಯಗಳೊಂದಿಗೆ ರೋಗಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಈ ಸಂದರ್ಭ ಮೇಲ್ನೋಟದ ಗಾಯಗಳನ್ನಷ್ಟೇ ಗುರತಿಸಿ ಚಿಕಿತ್ಸೆಗೆ ಒಳಪಡಿಸುವುದು ಪ್ರಕರಣವನ್ನು ವಿಫಲಗೊಳಿಸಬಹುದು. ಅಧಿಕ ರಕ್ತಸಂಚಾರ ಇರುವ ಪೆಲ್ವಿಕ್ ಭಾಗದಲ್ಲಿ ಉಂಟಾದ ಗಾಯ ರೋಗಿಯನ್ನು ಬಲಿಪಡೆಯುವ ಸಾಧ್ಯತೆಗಳೂ ಹೆಚ್ಚು. ಪೆಲ್ವಿಕ್ ಭಾಗವನ್ನು ಸರಿಯಾಗಿ ಜೋಡಣೆಗೊಳಿಸುವುದು, ಉನ್ನತ ಚಿಕಿತ್ಸೆಗೆ ಒಳಪಡಿಸುವುದು, ದೇಹದಲ್ಲಿ ರಕ್ತದ ಕೊರತೆಯಾಗದಂತೆ , ಕೊರತೆಯಿದ್ದಲ್ಲಿ ರಕ್ತ ಪೂರೈಸಿ ಚಿಕಿತ್ಸೆಗೆ ಒಳಪಡಿಸುವುದು ತನ್ನ ಜೀವನದಲ್ಲಿ ದೇಶ ಹಾಗೂ ವಿದೇಶಗಳಲ್ಲಿ ಕಲಿತ ಸಾಮಾನ್ಯ ಜ್ಞಾನವಾಗಿದೆ. ಮಂಗಳೂರು ವಿ.ವಿ- ದೇರಳಕಟ್ಟೆ ರಸ್ತೆಯಲ್ಲಿ ಸ್ಥಾಪನೆಗೊಂಡ 4 ವೈದ್ಯಕೀಯ ಕಾಲೇಜುಗಳು ಉತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ಹೊರಹೊಮ್ಮಿದ್ದು, ವಿಶ್ವಕ್ಕೆ ಉತ್ತಮ ವೈದ್ಯರನ್ನು ನೀಡಲು ಸಹಕಾರಿಯಾಗಿದೆ. ಕೆನರಾ ಆರ್ಥಪೆಡಿಕ್ ಸೊಸೈಟಿ ನಿರಂತರ ಕಲಿಕಾ ಶಿಕ್ಷಣ ಕರ‍್ಯಗಾರವನ್ನು ಹಮ್ಮಿಕೊಳ್ಳುತ್ತ ವೈದ್ಯರಲ್ಲಿ ಪರಸ್ಪರ ಜ್ಞಾನವಿನಿಮಯಕ್ಕೆ ಸಾಧ್ಯವಾಗಿದೆ ಎಂದರು.

ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ|.ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿ ಮಾತನಾಡಿ ಹಿರಿಯ ವೈದ್ಯರ ಸಲಹೆ ಅನುಭವಗಳನ್ನು ಗಳಿಸಿದಾಗ ಯುವ ವೈದ್ಯರ ಕರ್ತವ್ಯ ಜೀವನ ಯಶಸ್ಸು ಸಾಧ್ಯ. 10 ವರ್ಷಗಳ ಹಿಂದೆ ಆಸ್ಪತ್ರೆ ಸ್ಥಾಪಿಸುವ ಸಂದರ್ಭ ಆರ್ಥೊಪೆಡಿಕ್ ವಿಭಾಗದಲ್ಲಿ ವೈದ್ಯರಾಗಿ ಸಂಸ್ಥೆಗೆ ಪಾದಾರ್ಪಣೆ ನಡೆಸಿದವರ ಉತ್ತಮ ಸೇವೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಯಶಸ್ಸಿಗೆ ಕಾರಣವಾಗಿದೆ. ಕೇಳಿ ಕಲಿಯುವುದರಿಂದ ಜೀವನದ ಅತ್ಯುನ್ನತ ಮೈಲಿಗಲ್ಲನ್ನು ಸಾಧಿಸಲು ಸಾಧ್ಯ ಎಂದರು.

ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಗಳ ಆಡಳಿತ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ, ಪರಸ್ಪರ ಜ್ಞಾನ ಕೊಡು ಕೊಳ್ಳುವಿಕೆಯೊಂದಿಗೆ ಹಾಗೂ ಜ್ಞಾನ ವಿನಿಮಯ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ವಿಚಾರವಾಗಿರುತ್ತದೆ. ಕಲಿಯುವ ಶಿಕ್ಷಣಕ್ಕಿಂತ ಪಠ್ಯೇತರ ಅನುಭವ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಕಲಿಕಾ ಶಿಕ್ಷಣ ಕರ‍್ಯಗಾರಗಳು ವೈದ್ಯರಿಗೆ ಅನುಕೂಲಕ ಕಾರ್ಯಕ್ರಮವಾಗಿದೆ ಎಂದರು.

ಕೆನರಾ ಆರ್ಥಪೆಡಿಕ್ ಸೊಸೈಟಿ ಕರ‍್ಯದರ್ಶಿ ಡಾ.ರಿಝ್ವಾನ್, ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ದೇವದಾಸ್ ರೈ, ಕಣಚೂರು ಆರೋಗ್ಯ ವಿಜ್ಞಾನಗಳ ಸಲಹಾ ಮಂಡಳಿ ಸದಸ್ಯ ಡಾ. ವೆಂಕಟರಾಯ ಎಂ. ಪ್ರಭು, ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಾಹನವಾಝ್ ಮಾಣಿಪ್ಪಾಡಿ, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಎಸ್ ಮೋನಿಸ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಡಾ.ಸಲಾವುದ್ದೀನ್ ಆರೀಫ್ ಕೆ. ಸ್ವಾಗತಿಸಿದರು. ಡಾ.ಅಮರನಾಥ್ ಸವೂರ್ ಡಿ. ವಂದಿಸಿದರು. 15ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಕರ‍್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಸೀತಾರಾಮ್ ರಾವ್ ಅವರನ್ನು ಅಭಿನಂದಿಸಲಾಯಿತು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News