×
Ad

ಆಕ್ಷೇಪಕ್ಕೆ ಕಾರಣವಾಗಿದ್ದ ಟಿಡಿಆರ್ ಪ್ರಕರಣ: ಪೂರ್ವಭಾವಿ ಅನುಮೋದನೆಯ ಕಾರ್ಯಸೂಚಿ ಮುಂದೂಡಿಕೆ

Update: 2024-06-29 19:15 IST

ಮಂಗಳೂರು, ಜೂ. 29: ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಟಿಡಿಆರ್ (ವಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ನಡಿ ಪಡೆದುಕೊಳ್ಳುವ ಕುರಿತಂತೆ ಈಗಾಗಲೇ ಆಕ್ಷೇಪ ದಟ್ಟಗೊಂಡಿರುವಂತೆಯೇ, ಪಾಲಿಕೆಯ ಮೇಯರ್‌ರಿಂದ ಪೂರ್ವಭಾವಿ ಅನುಮೋದನೆ ಪಡೆದ ಎರಡು ಪ್ರಮುಖ ಪ್ರಕರಣಗಳು ಸಾಮಾನ್ಯ ಸಭೆಯಲ್ಲಿ ಮುಂದೂಡಲ್ಪಟ್ಟ ಘಟನೆ ನಡೆದಿದೆ.

ಹಿಂದುಳಿದ ವರ್ಗದವರಿಗೆ ವಸತಿ ಯೋಜನೆಗಾಗಿ ಪದವು ಗ್ರಾಮದ ಸರ್ವೆ ನಂ.81/ ಎಯ 1.44.8 ಎಕರೆ ಹಾಗೂ ಸ.ನಂ. 284 /5ರ 1.97.80 ಎಕರೆ ಸೇರಿ ಒಟ್ಟು 3.42.60 ಎಕರೆ ಜಮೀನನ್ನು ಜಾಗದ ಮಾಲಕರಿಂದ ಟಿಡಿಆರ್ ನಿಯಮದಡಿ ಸ್ವಾಧೀನ ಪಡಿಸಿ ಜಾಗದ ಮಾಲಕರಿಗೆ ಟಿಡಿಆರ್ ನೀಡಲು ಪರಿಷತ್ತಿನ ಮಂಜೂರಾತಿ ನಿರೀಕ್ಷಿಸಿ ಮೇಯರ್ ಪೂರ್ವಭಾಮಿ ಅನುಮೋದನೆ ನೀಡಿದ್ದರು.

ಇದೇ ವೇಳೆ, ಮರಕಡದ ಸ.ನಂ. 81-2(ಪಿ) ಮತ್ತು 81-3 (ಪಿ)ಯಲ್ಲಿನ ಒಟ್ಟು 09.15 ಎಕರೆ ಜಾಗವನ್ನು ಅದರ ಮಾಲಕರಿಗೆ ಟಿಡಿಆರ್ ನೀಡಿ ಸ್ವಾಧೀನ ಪಡಿಸುವ ಕುರಿತಂತೆ ಮೇಯರ್‌ರವರು ಪರಿಷತ್ತಿನ ಮಂಜೂರಾತಿ ನಿರೀಕ್ಷಿಸಿ ಪೂರ್ವಭಾವಿ ಅನುಮೋದನೆ ನೀಡಿದ್ದರು. ಈ ಎರಡೂ ಪ್ರಕರಣಗಳು ಶನಿವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಮಂಡನೆಯಾಗಿತ್ತು.

ಆದರೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮುಂದೂಡುವುದಾಗಿ ಪ್ರಕಟಿಸಿದರು.

ನಗರದಲ್ಲಿ ಟಿಡಿಆರ್ ದೊಡ್ಡ ದಂಧೆಯಾಗಿ ನಡೆಯುತ್ತಿದೆ. ರಸ್ತೆ ಅಗಲೀಕರಣದಂತಹ ತುರ್ತು ಅಗತ್ಯಗಳಿಗೆ ಜಮೀನುಗಳ ಸ್ವಾಧೀನಕ್ಕೆ ಹಣದ ಬದಲಿಗೆ ನಗರ ಪಾಲಿಕೆ ಟಿಡಿಆರ್ ನೀಡುವುದು ಸರಕಾರದ ಪ್ರಾಯೋಗಿಕ ಕ್ರಮವಾಗಿದ್ದರೂ, ಮಂಗಳೂರಿನಲ್ಲಿ ಭೂ ದಂಧೆಕೋರರು, ರಿಯಲ್ ಎಸ್ಟೇಟ್, ಬಿಲ್ಡರ್ ಲಾಬಿ, ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ದಂಧೆಯಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.

ಡಿವೈಎಫ್‌ಐ ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ನಗರದ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರಾದ ಮುನೀರ್ ಕಾಟಿಪಳ್ಳ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದರು.

ಕೆಲ ಸಮಯದ ಹಿಂದೆ ಮುಡಾದಲ್ಲಿ ಈ ತೆರನಾದ ಪ್ರಕರಣದಲ್ಲಿ ಲಂಚ ಪಡೆದ ಆರೋಪದಲ್ಲಿ ಜೈಲು ಸೇರಿದ ವೇಳೆ 11 ಎಕರೆ ನಿರುಪಯೋಗಿ ಜಮೀನನು ಕೋಟಿಗಟ್ಟಲೆ ಮೌಲ್ಯದ ಟಿಡಿಆರ್ ಪ್ರಕರಣವನ್ನು ಮುನೀರ್ ಕಾಟಿಪಳ್ಳ ನೇತೃತ್ವದ ತಂಡ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಟಿಡಿಆರ್ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News