ಅಪಾಯದಲ್ಲಿ ಅಂಬಟೆಮೂಲೆ ಸೇತುವೆ: ಸಂಚಾರ ಬಂದ್ ಮಾಡಿದ ಪಂಚಾಯತ್
ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಂಬಟೆಮೂಲೆ ಎಂಬಲ್ಲಿನ ಸೇತುವೆಯಲ್ಲಿ ಹೊಂಡಬಿದ್ದು ಸಂಚಾರಕ್ಕೆ ಅಪಾಯವಿರುವ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ. ಬಡಗನ್ನೂರು ಗ್ರಾಮ ಪಂಚಾಯತ್ ಈ ಬಗ್ಗೆ ಬ್ಯಾನರ್ ಅಳವಡಿಸಿ ರಸ್ತೆ ಸಂಚಾರವನ್ನು ನಿಷೇಧಗೊಳಿಸಿರುವ ಬಗ್ಗೆ ಪ್ರಕಟಿಸಿದೆ.
ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಗೇರಿ-ಈಶ್ವರಮಂಗಲ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯಲ್ಲಿ ಅಂಬಟೆಮೂಲೆ ಎಂಬಲ್ಲಿ ಸೇತುವೆಯೊಂದಿದ್ದು, ಈ ಸೇತುವೆಯ ಒಂದು ಭಾಗದಲ್ಲಿ ಹೊಡ್ಡ ಗಾತ್ರದ ಹೊಂಡ ಕಾಣಿಸಿ ಕೊಂಡು ಅಪಾಯದ ಸ್ಥಿತಿಯಲ್ಲಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕಳೆದ ಎರಡು ದಿನಗಳ ಹಿಂದೆ ಈ ಬೃಹತ್ ಗಾತ್ರದ ಹೊಂಡ ಕಾಣಿಸಿಕೊಂಡಿದೆ.
ವಾಹನ ಸಂಚಾರವನ್ನು ನಿಷೇಧಿಸಿ ಪಂಚಾಯತ್‍ನಿಂದ ಸೇತುವೆಯ ಎರಡೂ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿದೆ. `ರಸ್ತೆ ಕುಸಿದಿದೆ. ಅಪಾಯಕಾರಿ ಹೊಂಡವಿದೆ. ವಾಹನ ಸಂಚಾರವನ್ನು ನಿಷೇಧಿಸಲಾಗಿದೆ' ಎಂದು ಬಡಗನ್ನೂರು ಪಂಚಾಯತ್ ಆಡಳಿತವು ಸೂಚನಾ ಬ್ಯಾನರ್ ಅಳವಡಿಸಿದೆ. ಆದರೆ ಸಂಚಾರ ತಡೆಯಲು ರಸ್ತೆ ನಡುವೆ ಯಾವುದೇ ತಡೆಗಳನ್ನು ನಿರ್ಮಿಸಲಾಗಿಲ್ಲ. ಇದರಿಂದಾಗಿ ವಾಹನ ಸಂಚಾರವು ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಅಂಬಟೆಮೂಲೆ ಪರಿಸರದಿಂದ ಈಶ್ವರಮಂಗಲ ಪೇಟೆ, ಪಟ್ಟೆ ಮತ್ತು ಪೆರಿಗೇರಿ ಪ್ರದೇಶಗಳನ್ನು ಸಂಪರ್ಕಿಸಲು ಈ ರಸ್ತೆ ಏಕೈಕ ರಸ್ತೆಯಾಗಿದೆ. ವಿದ್ಯಾರ್ಥಿಗಳಿಗೂ ಶಾಲೆ ಕಾಲೇಜುಗಳಿಗೆ ತೆರಳಲು ಈ ರಸ್ತೆಯಲ್ಲಿ ಸಾಗುವುದು ಅನಿವಾರ್ಯ ವಾಗಿದೆ. ಇದೀಗ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸುವುದು ಕಡಿಮೆಯಾಗಿದ್ದರೂ ದಿನಂಪ್ರತಿ ಇತರ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ. ಸೇತುವೆಯ ಮೇಲೆ ಸಂಚಾರದ ಅನಿವಾರ್ಯತೆಯ ಜೊತೆಗೆ ಹೆಚ್ಚು ಅಪಾಯ ಕಾರಿಯಾಗಿರುವುದರಿಂದ ಹಾಗೂ ವಾಹನ ಸಂಚಾರದಿಂದ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಈ ಸೇತುವೆ ಕುಸಿತಗೊಂಡಲ್ಲಿ ಈ ಭಾಗದ ಸಾರ್ವಜನಿಕರು ಬಹಳಷ್ಟು ಸಂಕಷ್ಟ ಎದುರಿಸಬೇಕಾಗಿದೆ.
ಪುತ್ತೂರಿನಲ್ಲಿ ಮುಳುಗು ಸೇತುವೆ ಎಂದೇ ಪ್ರಚಲಿತವಾಗಿರುವ ಚೆಲ್ಯಡ್ಕ ಮುಳುಗು ಸೇತುವೆಯು ತೀರಾ ನಾದುರಸ್ತಿ ಯಲ್ಲಿದ್ದ ಕಾರಣ ಹಾಗೂ ಇಲ್ಲಿ ಸ್ವಲ್ಪ ಹೆಚ್ಚು ಮಳೆಯಾದರೂ ನೀರು ತುಂಬಿ ರಸ್ತೆ ಮೇಲೆ ಹರಿದು ವಾಹನ ಸಂಚಾರ ಸ್ಥಗಿತಗೊಳ್ಳುತ್ತಿರುವ ಕಾರಣ ಶುಕ್ರವಾರ ಸೇತುವೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೇತುವೆಯ ಮೂಲಕ ವಾಹನ ಸಂಚಾರವನ್ನು ರಾತ್ರಿ ವೇಳೆಯಲ್ಲಿ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಹಗಲು ವೇಳೆಯಲ್ಲಿ ಘನ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಆದೇಶ ನೀಡಿದ್ದರು. ಇದೀಗ ಅಂಬಟೆಮೂಲೆ ಸೇತುವೆಯಲ್ಲಿ ಸಂಚಾರವನ್ನು ಬಡಗನ್ನೂರು ಪಂಚಾಯತ್ ಸ್ಥಗಿತಗೊಳಿಸುವ ಮೂಲಕ ಪುತ್ತೂರು ತಾಲೂಕಿನ 2 ಸೇತುವೆಗಳಲ್ಲಿ ವಾಹನ ಸಂಚಾರ ನಿಲುಗಡೆಯಾಗಿದೆ. ಈ ಭಾಗದ ಪ್ರಯಾಣಿಕರು ಸುತ್ತು ಬಳಸಿ ಸಾಗುವುದು ಅನಿವಾರ್ಯವಾಗಿದೆ.