×
Ad

ಸುರತ್ಕಲ್‌ - ಎಂಆರ್‌ಪಿಎಲ್‌ ರಸ್ತೆಗೆ ಕ್ಯಾ.ಪ್ರಾಂಜಲ್ ಹೆಸರಿಡಲು ಕಾಂಗ್ರೆಸ್‌ ಒತ್ತಾಯ

Update: 2024-07-26 22:02 IST

ಸುರತ್ಕಲ್: ಇಲ್ಲಿನ ವೃತ್ತ ಹಾಗೂ ಸುರತ್ಕಲ್‌- ಎಂಆರ್‌ಪಿಎಲ್‌ ರಸ್ತೆಗೆ ಸುರತ್ಕಲ್‌ ನ ವೀರಯೋಧ ಕ್ಯಾ.ಪ್ರಾಂಜಲ್ ಅವರ ಹೆಸರು ನಾಮಕರಣ ಮಾಡಬೇಕೆಂದು ಸುರತ್ಕಲ್‌ ಕಾಂಗ್ರೆಸ್‌ ಆಗ್ರಹಿಸಿದೆ.

ಶುಕ್ರವಾರ ರಾಷ್ಟ ಭಕ್ತ ವೇದಿಕೆ ಸುರತ್ಕಲ್‌ ವತಿಯಿಂದ ಕಾರ್ಗಿಲ್‌ ವಿಜಯೋತ್ಸವದ ಹಿನ್ನೆಲೆಯ ಸುರತ್ಕಲ್‌ ಪೇಟೆಯಲ್ಲಿ ನಿರ್ಮಿಸಿದ್ದ ಕ್ಯಾ. ಪ್ರಾಂಜಲ್‌ ಅವರ ಪುತ್ತಳಿಗೆ ಪುಷ್ಪನಮನ ಸಲ್ಲಿಸಿ ಬಳಿಕ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅದು ಆಗ್ರಹಿಸಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ ಅವರು, ಸುರತ್ಕಲ್‌ ವೃತ್ತ ಮತ್ತು ಸುರತ್ಕಲ್‌- ಎಂಆರ್‌ಪಿಎಲ್‌ ರಸ್ತೆಗೆ ನಮ್ಮ ಸುರತ್ಕಲ್‌ ಪರಿಸರದಲ್ಲೇ ಹುಟ್ಟಿ ಬೆಳೆದು ದೇಶಕ್ಕಾಗಿ ಶತ್ರುಗಳೊಂದಿಗೆ ಸೆಣಸಾಡಿ ವೀರ ಮರಣ ಅಪ್ಪಿರುವ ನಮ್ಮ ಊರಿನ ವೀರ ಯೋಧ ಪ್ರಾಂಜಲ್‌ ಅವರ ಹೆಸರು ನಾಮಕರಣ ಮಾಡಬೇಕು. ಜೊತೆಗೆ ರಾಷ್ಟ ಭಕ್ತ ವೇದಿಕೆ ಸುರತ್ಕಲ್‌ ನಿರ್ಮಿಸಿರುವ ತಾತ್ಕಾಲಿಕ ಪುತ್ತಳಿಯ ಸ್ಥಳದಲ್ಲಿ ಶಾಶ್ವತವಾದ ಪುತ್ತಳಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಸದ್ಯ ರಾಜ್ಯದಲ್ಲಿ ನಮ್ಮದೇ ಸರಕಾರ ಇರುವ ಹಿನ್ನೆಲೆಯಲ್ಲಿ ಸರಕಾರದ ಮಟ್ಟದ ಎಲ್ಲಾ ಕಾರ್ಯ ಗಳನ್ನು ನಮ್ಮ ನಾಯಕರ ಜೊತೆ ಮಾತನಾಡಿ ಸಹಕಾರ ನೀಡಲಾಗುವುದು ಎಂದು ನುಡಿದರು.

ಸುರತ್ಕಲ್‌ ವೃತ್ತಕ್ಕೆ ಸಾವರ್ಕರ್‌ ಹೆಸರು ನಾಮಕರಣದ ಕುರಿತು ಮಹಾನಗರ ಪಾಲಿಕೆಯಲ್ಲಿರುವ ಪ್ರಸ್ತಾವನೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಕೋ ಆಡಿನೇಟರ್‌ ಪ್ರತಿಭಾ ಕುಳಾಯಿ, ಯಾವುದೋ ಊರಿನ ಯಾರದೋ ಹೆಸರು ನಮ್ಮ ಊರಿನ ವೃತ್ತ ಮತ್ತು ರಸ್ತೆಗೆ ನಾಮಕರಣ ಮಾಡುವ ಬದಲು ನಮ್ಮವರೇ ಆದ ವೀರ ಯೋಧನ ಹೆಸರು ನಾಮಕಾರಣ ಮಾಡಬೇಕಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. ಹಾಗಾಗಿ ಕ್ಯಾ. ಪ್ರಾಂಜಲ್‌ ಅವರ ಶಾಶ್ವತ ಪುತ್ತಳಿ ನಿರ್ಮಾಣದ ಜೊತೆಗೆ ವೃತ್ತ ಮತ್ತು ಸುರತ್ಕಲ್‌- ಎಂಆರ್‌ಪಿಎಲ್‌ ರಸ್ತೆಗೆ ಕ್ಯಾ. ಪ್ರಾಂಜಲ್‌ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.

ಕ್ಯಾ. ಪ್ರಾಂಜಲ್‌ ಅವರ ಪುತ್ತಳಿಗೆ ಪುಷ್ಪನಮನ ಸಲ್ಲಿಸುವ ಸಂದರ್ಭ ಮತ್ತು ಪತ್ರಿಕಾ ಗೋಷ್ಠಿಯಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಕೆಪಿಸಿಸಿ ಕೋ ಆಡಿನೇಟರ್‌ ಪ್ರತಿಭಾ ಕುಳಾಯಿ, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷರಾದ ಬಶೀರ್‌ ಬೈಕಂಪಾಡಿ, ಆನಂದ ಅಮೀನ್‌, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕುಳಾಯಿ, ಕಿಸಾನ್‌ ಘಟಕದ ಅಧ್ಯಕ್ಷ ರಾಜೇಶ್‌ ಶೆಟ್ಟಿ ಪಡ್ರೆ, ಮೀನುಗಾರಿಕಾ ಘಟಕಾಧ್ಯಕ್ಷ ಶ್ರೀಕಾಂತ್‌ ಸಾಲ್ಯಾನ್‌, ಬ್ಲಾಕ್‌ ಪ್ರಚಾರ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಜೈಸನ್‌ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News