ಮೂಡುಬಿದಿರೆ: ಕಾರು ಢಿಕ್ಕಿ; ಸೈಕಲ್ ಸವಾರ ಮೃತ್ಯು
ಮೂಡುಬಿದಿರೆ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸೈಕಲ್ ಸವಾರರೋರ್ವರು ಮೃತಪಟ್ಟ ಘಟನೆ ಪುತ್ತಿಗೆ ಪದವು ಹಂಡೇಲು ಬಳಿ ಶುಕ್ರವಾರ ನಡೆದಿದೆ.
ಹಲವು ದಶಕಗಳಿಂದ ಮೂಡುಬಿದಿರೆ ಮಾರ್ಕೆಟಿನ ವಾರದ ಸಂತೆಯಲ್ಲಿ ಚಕ್ಕುಲಿ ಸಹಿತ ಕರಿದ ತಿಂಡಿ ತಿನಿಸುಗಳು, ತುಳುವರ ಪ್ರೀತಿಯ ಸೋಜಿ ಸಹಿತ ಪಾನೀಯಗಳ ವರ್ತಕರಾಗಿ ಜನಾನುರಾಗಿಯಾಗಿದ್ದ ಪುತ್ತಿಗೆ ಪದವು ಹಂಡೇಲಿನ ರಮೇಶ್ ಅಂಚನ್ (65) ಮೃತಪಟ್ಟವರು.
ಪುತ್ತಿಗೆ ಪದವು ಹಂಡೇಲು ಬಳಿ ಸಂಜೆ ವೇಳೆಗೆ ಸೈಕಲಲ್ಲಿ ಹೋಗುತ್ತಿದ್ದ ಅವರಿಗೆ ಕಲ್ಲಮುಂಡ್ಕೂರು ಕಡೆಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದ್ದು ತಲೆ, ಕಾಲಿಗೆ, ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿ ತಾದರೂ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಅವರು ಮೃತಪಟ್ಟಿದ್ದಾರೆ. ಮೂಡುಬಿದಿರೆ ಸಂತೆ ಮಾರ್ಕೆಟ್ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರವಾದ ಬಳಿಕ ಪುತ್ತಿಗೆ ಪಂಚಾಯತ್ ನ ಪಂಪ್ ಆಪರೇಟರ್ ಆಗಿ ತನ್ನ ಕರ್ತವ್ಯವನ್ನು ಅವರು ಮುಂದುವರೆ ಸಿದ್ದರು. ಅಪಾರ ಧಾರ್ಮಿಕ ಶ್ರದ್ಧೆಯಿಂದ 18 ಬಾರಿ ಶಬರಿ ಮಲೆ ಯಾತ್ರೆ ಕೈಗೊಂಡು ಗುರುಸ್ವಾಮಿಯಾಗಿಯೂ ಅವರು ಹಲವರಿಗೆ ಮಾರ್ಗದರ್ಶಕರಾಗಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.