×
Ad

ಆಟಿಕಳೆಂಜದ ಹೆಸರಿನಲ್ಲಿ ವಂಚನೆ| ದೂರು ದಾಖಲಿಸಲು ನಿರಾಕರಿಸಿದರೆ ಪೊಲೀಸರ ವಿರುದ್ಧ ಕ್ರಮ: ಡಿಸಿಪಿ ಎಚ್ಚರಿಕೆ

Update: 2024-07-28 17:10 IST

ಮಂಗಳೂರು: ಸಾರ್ವಜನಿಕರು ಪೊಲೀಸರು ಠಾಣೆಗಳಲ್ಲಿ ನೀಡುವ ದೂರುಗಳನ್ನು ಸ್ವೀಕರಿಸಿ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರೆ ಅಥವಾ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂತಹ ಠಾಣೆಯ ಪೊಲೀಸರ ವಿರುದ್ಧವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ಎಚ್ಚರಿಕೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಯಾ ಠಾಣೆಯ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರೆ ಸಾರ್ವಜನಿಕರು ನೇರ ಪೊಲೀಸ್ ಆಯುಕ್ತರ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದು ದಿನೇಶ್ ಕುಮಾರ್ ಸ್ಪಷ್ಟ ಪಡಿಸಿದರು.

ಕೆಲವು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿಲ್ಲ ಎಂಬುದಾಗಿ ಪ.ಜಾತಿ, ಪಂಗಡದ ಸಮುದಾಯದ ಪ್ರಮುಖರು ಸಭೆಯಲ್ಲಿ ತೀವ್ರ ಅಸಮಾಧಾನ ವ್ತಕ್ತಪಡಿಸಿದ ಕಾರಣ ಎಲ್ಲಾ ಠಾಣೆಗಳ ಅಧಿಕಾರಿಗಳಿಗೆ ಡಿಸಿಪಿ ಎಚ್ಚರಿಕೆ ನೀಡಿದರು.

ಒಂದು ವೇಳೆ ಸಿವಿಲ್ ಪ್ರಕರಣದಲ್ಲಿ ಕ್ರಿಮಿನಲ್‌ಗೆ ಸಂಬಂಧಿಸಿದ ಅಂಶಗಳಿದ್ದರೂ ಅದರ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳ ಬೇಕು. ಪೊಲೀಸರಿಂದ ತಪ್ಪಾದರೆ ಅವರ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ದೂರು ಸ್ವೀಕರಿಸುವ ಬದಲು ಸ್ವಯಂ ರಾಜಿಸಂಧಾನ ನಡೆಸುವುದು ಸರಿಯಲ್ಲ ಎಂದು ಡಿಸಿಪಿ ಹೇಳಿದರು.

ಆಟಿ ತಿಂಗಳಿನಲ್ಲಿ ಇತರ ಸಮುದಾಯದವರು ದಲಿತರಿಂದ ಆಟಿಕಳೆಂಜದ ವೇಷ ಹಾಕಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಇದು ವ್ಯವಸ್ಥಿತ ದೌರ್ಜನ್ಯವಾಗಿದೆ. ಹಾಗಾಗಿ ‘ಆಟಿಕಳೆಂಜ’ ವೇಷ ಹಾಕಿಸುವವರು ಕಡ್ಡಾಯವಾಗಿ ಪೊಲೀಸರಿಂದ ಅನುಮತಿ ಪಡೆಯುವಂತೆ ಸೂಚನೆ ನೀಡಬೇಕು. ನಗರದಲ್ಲಿ ಕಳೆದ ವರ್ಷವೂ ಇದೇ ರೀತಿ ದೌರ್ಜನ್ಯ ನಡೆಸಲಾಗಿತ್ತು ಎಂದು ಸದಾಶಿವ ಉರ್ವಸ್ಟೋರ್ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ನಿರ್ದಿಷ್ಟವಾಗಿ ದೂರುಗಳಿದ್ದರೆ ನೀಡಬ ಹುದು. ಆದರೆ ಪರವಾನಿಗೆ ಪಡೆಯಬೇಕೆಂಬ ನಿಯಮ ರೂಪಿಸುವುದು ಸಾಧ್ಯವಿಲ್ಲ ಎಂದರು.

ಮುಲ್ಕಿ ಠಾಣಾಧಿಕಾರಿ ಹಾಗೂ ಸಿಬ್ಬಂದಿಯು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಠಾಣಾಧಿಕಾರಿಯ ವರ್ತನೆಯೂ ಸರಿಯಿಲ್ಲ ಎಂದು ಹಲವರು ಸಭೆಯಲ್ಲಿ ದೂರಿದರು.

ಕಾರ್ನಾಡು ಅಮೃತನಗರದಲ್ಲಿರುವ ಮನೆಗೆ ನುಗ್ಗಿ ಸಹೋದರನ ಕೊಲೆಗೆ ಯತ್ನಿಸಿರುವ ಬಗ್ಗೆ ಎಫ್‌ಐಆರ್ ದಾಖಲಾಗಿ ೩ ತಿಂಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆಯ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ್ದ ತನ್ನನ್ನು ಸಂಜೆಯಿಂದ ೨ ಗಂಟೆಯ ನಸುಕಿನವರೆಗೆ ಠಾಣೆಯಲ್ಲಿ ಕುಳ್ಳಿರಿಸಿದ್ದರು ಎಂದು ತುಳಸಿ ಎಂಬವರು ಆರೋಪಿಸಿದರು.

ಈ ಪ್ರಕರಣವೂ ಸೇರಿದಂತೆ ಮುಲ್ಕಿ ಠಾಣಾಧಿಕಾರಿಯ ನಿರ್ಲಕ್ಷ್ಯ, ದುರ್ವರ್ತನೆ ಬಗ್ಗೆ ತನಿಖೆ ನಡೆಸುವಂತೆ ದಲಿತ ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ವಿಚಾರಣೆ ನಡೆಸಲು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್‌ಗೆ ಡಿಸಿಪಿ ಸೂಚನೆ ನೀಡಿದರು.

ಮೂಡುಬಿದಿರೆ ಠಾಣಾ ವ್ಯಾಪ್ತಿಯ ಧರೆಗುಡ್ಡೆಯಲ್ಲಿ ತಲವಾರು ಹಿಡಿದುಕೊಂಡು ವಿಕಲಚೇತನರ ಮೇಲೆ ದೌರ್ಜನ್ಯ ಎಸಗಿದ ಘಟನೆ ಎಪ್ರಿಲ್‌ನಲ್ಲಿ ನಡೆದಿತ್ತು. ಆದರೆ ಈವರೆಗೆ ಎಫ್‌ಐಆರ್ ಮಾಡಿಲ್ಲ ಎಂದು ದಲಿತ ಮುಖಂಡ ಎಸ್.ಪಿ. ಆನಂದ ದೂರಿದರು. ಈ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ ನೀಡಿದರು. ರಾಮಚಂದ್ರ, ಗಿರೀಶ್ ಕುಮಾರ್, ಶೀನ ಮತ್ತಿತರರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News