ನಾರಾಯಣ ಗುರು ಯುವ ವೇದಿಕೆಯ ರಜತ ಸಂಭ್ರಮ ಕಾರ್ಯಕ್ರಮ
ಮಂಗಳೂರು: ನಗರದ ನಾರಾಯಣಗುರು ಯುವ ವೇದಿಕೆಯ ರಜತ ಸಂಭ್ರಮ ಸಲುವಾಗಿ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ, ಸಾಧನಾಶೀಲರಿಗೆ ಸನ್ಮಾನ ಕಾರ್ಯಕ್ರಮವು ರವಿವಾರ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಶಿಕ್ಷಣ ವ್ಯಾಪಾರೀಕರಣವಾದರೆ ಮಕ್ಕಳು ಕೂಡ ಅದನ್ನು ಮುಂದುವರಿಸುವ ಸಾಧ್ಯತೆ ಇದೆ. ಹಾಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ದೃಷ್ಟಿ ಯಿಂದ ಶಿಕ್ಷಣವು ಎಲ್ಲರಿಗೆ ಸಿಗುವಂತೆ ಮಾಡಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರಕಾರ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು ಎಂದು ನಿರ್ಣಯ ಕೈಗೊಂಡಿತ್ತು. ಕ್ರಮೇಣ ಮಹಿಳೆಯರೂ ಶಿಕ್ಷಣ ಪಡೆಯಲಾರಂಭಿಸಿದರು. ಆದರೆ ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾನತೆ ಹೆಸರಿನಲ್ಲಿ ಸರಕಾರಿ ಶಾಲಾ ಕಾಲೇಜುಗಳನ್ನು ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಹಿಂದೆ ಮಠಗಳಲ್ಲಿ ಉಚಿತ ಶಿಕ್ಷಣ ಸಿಗುತ್ತಿತ್ತು. ಈಗ ಅದಾವುದೂ ಇಲ್ಲ. ಅಜೀಂ ಪ್ರೇಮ್‌ಜಿ ಅವರಂತಹ ಸಾಫ್ಟ್‌ವೇರ್ ದಿಗ್ಗಜರು ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಉಚಿತ ಮೊಟ್ಟೆ ಭಾಗ್ಯ ನೀಡುವ ಉದಾರತೆ ತೋರಿಸಿರುವುದು ಶ್ಲಾಘನೀಯ ಎಂದರು.
ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಸುದರ್ಶನ್ ಕೊಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞೆ ಶಶಿಲೇಖಾ, ಸಹಕಾರಿ ರಂಗದ ಸಾಧಕ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಚಿತ್ತರಂಜನ್ ಬೋಳಾರ್, ಕಂಬಳದ ಯುವ ಸಾಧಕ ತ್ರಿಶಾಲ್ ಪೂಜಾರಿ, ಪೊಲೀಸ್ ಅಧಿಕಾರಿ ಹರೀಶ್ ಪದವಿನಂಗಡಿ ಅವರನ್ನು ಸನ್ಮಾನಿಸ ಲಾಯಿತು. ಸಾಧಕರಿಗೆ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್‌ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ನಮ್ಮ ಕುಡ್ಲ ಸಂಸ್ಥೆಯ ಮುಖ್ಯಸ್ಥ ಲೀಲಾಕ್ಷ ಕರ್ಕೆರಾ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಟಿ. ಸುವರ್ಣ, ವೈದ್ಯ ಡಾ. ಶಿವಪ್ರಸಾದ್, ಉದ್ಯಮಿಗಳಾದ ಸಂದೇಶ್ ಪೂಜಾರಿ, ರತೀಂದ್ರನಾಥ್ ಮಾತನಾಡಿದರು.
ವೇದಿಕೆಯ ಸಹನಿರ್ದೇಶಕ ನೀಲಯ್ಯ ಅಗರಿ ಸ್ವಾಗತಿಸಿದರು. ಸುಮಂತ್ ಸುವರ್ಣ ವಂದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.