×
Ad

ಉದ್ಯಮಿ ಪ್ರಕಾಶ್ ಶೆಟ್ಟಿಗೆ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ

Update: 2024-09-29 18:37 IST

ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್‍ಫೇರ್ ಟ್ರಸ್ಟ್, ಸಿರಿಮುಡಿ ದತ್ತಿನಿಧಿ ಇವರ ಸಹಭಾಗಿತ್ವ ದಲ್ಲಿ ನೀಡಲ್ಪಡುವ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಕೊಡುಗೈ ದಾನಿ, ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಕೆ. ಪ್ರಕಾಶ್ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಅವರು, ನನ್ನ ಪಡುಬಿದ್ರಿಯ ಅಭಿಮಾನಿ ಬಳಗದ ಪ್ರೀತಿಯು ಅಮೋಘವಾಗಿದೆ. ಇಂದಿನ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನವು ನನಗಿದು ಅವಿಸ್ಮರಣೀಯ. ಬಂಟರ ಸಮುದಾಯದ ಅಭ್ಯುತ್ಥಾನಕ್ಕಾಗಿ ಜೀವನ ಪಯರ್ಂತ ಮುಂದುವರಿಸುವುದಾಗಿ ಹೇಳಿದ ಅವರು, ನನ್ನ ಪಾಲಿನ ಲಕ್ಷ್ಮೀದೇವಿ ನನ್ನ ಪತ್ನಿ ಆಶಾ ಆಗಿದ್ದಾಳೆ ಎಂದು ನುಡಿದರು.

ಪಡುಬಿದ್ರಿಗಾಗಿ ಬಲು ದೊಡ್ಡ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗೋಣ. ಇದಕ್ಕಾಗಿ ಐದು ಕೋಟಿ ರೂ. ದೇಣಿಗೆ ನೀಡಲಿದ್ದೇನೆ. ಇದಕ್ಕಾಗಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು ಎಂದು ಕರೆ ನೀಡಿದರು.

ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಸಿ. ಎ ಅಶೋಕ್ ಶೆಟ್ಟಿ ಅವರು ಇಂದಿನ ಸೋಶಿಯಲ್ ವೆಲ್ಫೇರ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಹಿರಿಯ, ಕಿರಿಯರನ್ನು ಮೇಲೆತ್ತುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ. ದೇಶ ವಿದೇಶಗಳ ನಮ್ಮ ಬಂಟ ಬಾಂಧವರಿಂದಲೂ ಸಹಾಯಪಡೆದು ವಿದ್ಯಾರ್ಥಿಗಳಿಗೆ ಹಂಚೋಣ. ವಿದ್ಯಾಭ್ಯಾಸದಿಂದಲೂ ಸಮಾಜವೂ ಬಲಯುತವಾಗಬಲ್ಲದು ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಬದುಕು ಸಮಾಜದ ಋಣ ತೀರಿಸುವ ಬದುಕಾಗಬೇಕು. ಪ್ರಕಾಶ ಶೆಟ್ಟಿ ಅವರಂತಹಾ ಅದರ್ಶ ವ್ಯಕ್ತಿತ್ವಗಳು ಮತ್ತಷ್ಟು ಮೂಡಿಬರಲೆಂದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಬಂಟ ಸಮಾಜದ ಉದ್ಧಾರಕ್ಕಾಗಿ ಅಹರ್ನಿಶಿ ದುಡಿಯು ತ್ತಿರುವವರು ಪ್ರಕಾಶ್ ಶೆಟ್ಟಿ ಅವರಾಗಿದ್ದಾರೆ. ಮಾನವ ಸಂಪನ್ಮೂಲ ಸದ್ಬಳಕೆಯಲ್ಲಿ ಬಂಟ ಸಮಾಜ ಮಂಚೂಣಿಯಲ್ಲಿದೆ. ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೊಡುಗೆಯಿತ್ತವರನ್ನು ಮರೆಯಬಾರದೆಂದರು.

ಕರುಣಾಕರ ಅರ್. ಶೆಟ್ಟಿ, ಪುಣೆ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಸೀತಾರಾಮ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎರ್ಮಾಳ್ ಶಶಿಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷೆ ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು.

ಸಿರಿಮುಡಿ ದತ್ತಿನಿಧಿಯ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಪ್ರಾಸ್ತಾವಿಸಿದರು. ಜಯ ಶೆಟ್ಟಿ ಪದ್ರ ಹಾಗೂ ಡಾ| ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ವಿಶೇಷತೆಗಳು: ಸಭಾಕಾರ್ಯಕ್ರಮದ ಆರಂಭದಲ್ಲಿ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂಟರ ಭವನದವರೆಗೆ ತೆರೆದ ವಾಹನದಲ್ಲಿ ವಿವಿಧ ಟ್ಯಾಬ್ಲೋಗಳೊಂದಿಗೆ ಕೆ. ಪ್ರಕಾಶ್ ಶೆಟ್ಟಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ವೇದಿಕೆಯಲ್ಲಿ ವಿಶಿಷ್ಠ ರೀತಿಯಲ್ಲಿ ಸಾಂಪ್ರದಾಯಕವಾಗಿ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು. ಬಳಿಕ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ 15ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ, ವಿಧವಾ ವೇತನ, ವಿಶೇಷ ಚೇತನರಿಗೆ ಧನ ಸಹಾಯದ ರೂಪದಲ್ಲಿ ವಿತರಿಸಲಾಯಿತು. ಬಂಟಾಶ್ರಯ ಯೋಜನೆಗಾಗಿ ಸ್ಥಳವನ್ನಿತ್ತ ಮಾಕ್ರ್ಸ್ ಡಿಸೋಜರಿಗೆ ಮುಂಬೈ ಉದ್ಯಮಿ ಎಲ್ಲೂರು ಗುತ್ತು ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಮುಂಗಡ ಹಣವನ್ನು ಹಸ್ತಾಂತರಿಸಲಾಯಿತು.

ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಹಾಗೂ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದ ಮಾಹಿತಿ ಕೈಪಿಡಿ ಹಾಗೂ ಸಿಡಿ ಮುಡಿ ದತ್ತಿನಿಧಿ ಕೋ-ಆಪರೇಟಿವ್ ಸೊಸೈಟಿಯ ಠೇವಣಾತಿ ಪತ್ರವನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸಭೆಯಲ್ಲಿ ಸಮ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News