ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಯ ಚಿನ್ನಾಭರಣ ಕಳವು
Update: 2024-12-28 21:33 IST
ಕಾರ್ಕಳ, ಡಿ.28: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿ ಕೊಂಡು ಪರಾರಿಯಾಗಿರುವ ಘಟನೆ ಡಿ.27ರಂದು ಮಧ್ಯಾಹ್ನ ವೇಳೆ ಕಾರ್ಕಳ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಪ್ರಣವ್ ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ, ಚಿನ್ನದ ಕಿವಿಯ ಓಲೆ ತೋರಿಸುವಂತೆ ಕೇಳಿದರು. ಆಗ ಅಂಗಡಿಯಲ್ಲಿದ್ದ ರೇಣುಕಾ, ನನ್ನ ಪತಿ ಬರುತ್ತಾರೆ, ಅರ್ಧ ಗಂಟೆ ಬಿಟ್ಟು ಬನ್ನಿ ಎಂದು ಹೇಳಿದರು. ಆದರೆ ಆತ ಅಲ್ಲಿಯೇ ಅಂಗಡಿಯಲ್ಲಿ ನಿಂತುಕೊಂಡಿದ್ದು ನಂತರ ಬೆಳ್ಳಿಯ ಉಂಗುರವನ್ನು ತೋರಿಸುವಂತೆ ತಿಳಿಸಿದನು.
ಅದರಂತೆ ಬೆಳ್ಳಿಯ ಉಂಗುರವನ್ನು ತೋರಿಸುತ್ತಿರುವಾಗ ಆತ ಅಂಗಡಿಯ ಶೋಕೇಸ್ ಗ್ಲಾಸ್ ಮೇಲೆ ಇಟ್ಟಿದ್ದ ಮೂರು ಜೊತೆ ಕಿವಿಯ ಜುಮುಕಿ, 3 ಚಿನ್ನದ ಉಂಗುರಗಳಿದ್ದ ಬಾಕ್ಸ್‌ನ್ನು ಕಳವು ಮಾಡಿಕೊಂಡು ಪರಾರಿಯಾದನು ಎಂದು ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.