×
Ad

ಪ್ರಮುಖ ರಸ್ತೆಯಲ್ಲೇ ಆಹಾರ ಮೇಳ: ಡಿವೈಎಫ್‌ಐ ವಿರೋಧ

Update: 2025-01-17 21:13 IST

ಸಾಂದರ್ಭಿಕ ಚಿತ್ರ

ಮಂಗಳೂರು: ನಗರದ ಪ್ರಮುಖ ರಸ್ತೆಯಲ್ಲೇ ಆಹಾರ ಮೇಳ ನಡೆಸಲು ಅವಕಾಶ ಮಾಡಿಕೊಟ್ಟಿರುವ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ನಡೆಗೆ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಮಣ್ಣಗುಡ್ಡ, ಲಾಲ್‌ಭಾಗ್, ಲೇಡಿಹಿಲ್ ಮುಖ್ಯ ರಸ್ತೆಯನ್ನು ಮುಚ್ಚಿ ನಡೆಸಲು ಹೊರಟಿರುವ ಸ್ಟ್ರೀಟ್ ಫುಡ್ ಫೆಸ್ಟಿವಲ್‌ನಿಂದಾಗಿ ವಿಪರೀತ ವಾಹನ ದಟ್ಟಣೆಯುಂಟಾಗಿ ಸಂಚಾರಗಳೆಲ್ಲವೂ ಅಸ್ತವ್ಯಸ್ತ ಗೊಂಡು ಜನಸಾಮಾನ್ಯರು ತೊಂದರೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ನಗರದ ಹೃದಯ ಭಾಗದ ಮುಖ್ಯ ರಸ್ತೆಯಲ್ಲೇ ಆಯೋಜಕರಿಗೆ ಆಹಾರ ಮೇಳ ನಡೆಸಲು ಅವಕಾಶ ಮಾಡಿಕೊಟ್ಟಿರುವ ಪಾಲಿಕೆ ಮತ್ತು ಜಿಲ್ಲಾಡಳಿತದ ನಡೆ ಸರಿಯಲ್ಲ ಎಂದು ಡಿವೈಎಫ್‌ಐ ತಿಳಿಸಿದೆ.

ನಗರದ ಸೌಂದರ್ಯಕ್ಕೆ ಬೀದಿಬದಿ ವ್ಯಾಪಾರಗಳು ಅಡಚಣೆಯಾಗಲಿದೆ ಎಂಬ ನೆಪವೊಡ್ಡಿ ಬೀದಿಯಲ್ಲಿ ತಳ್ಳುಗಾಡಿ ಮೂಲಕ ಆಹಾರ ಮಾರುವವರನ್ನು ಪಾಲಿಕೆ ಆಡಳಿತ ಬಲವಂತದಿಂದ ತೆರವುಗೊಳಿಸಬಹುದು, ಪೊಲೀಸ್ ಇಲಾಖೆ ಟ್ರಾಫಿಕ್ ಸಮಸ್ಯೆ ಮುಂದಿಡಬಹುದು. ಆದರೆ ಪ್ರಭಾವಿಗಳು ಪ್ರತಿಷ್ಠೆಗಾಗಿ ನಡೆಸುವ ಆಹಾರ ಮೇಳಗಳು ರಾಜ ಬೀದಿ ಯಲ್ಲೇ ನಡೆಸಲು ಅವಕಾಶ ಸಿಗುವುದೆಂದರೆ ಏನರ್ಥ? ಪ್ರಭಾವಿಗಳ ಮಾತಿಗೆ ಪಾಲಿಕೆಯ ರಸ್ತೆ, ಪುಟ್ಪಾತ್ ಎಲ್ಲೆಂದರಲ್ಲೂ ಆಯೋಜಿಸಲು ಅವಕಾಶ ಕಲ್ಪಿಸುವುದು ಎಷ್ಟು ಸರಿ? ಆಹಾರ ಮೇಳಕ್ಕಾಗಿ ಮುಖ್ಯರಸ್ತೆಗಳನ್ನೆಷ್ಟೇ ದಿನ ಮುಚ್ಚಿದರೂ ಪೊಲೀಸ್ ಇಲಾಖೆ ಯಾಕೆ ಮೌನ ವಹಿಸುತ್ತದೆ ಎಂದು ಪ್ರಶ್ನಿಸಿದೆ.

ಈಗಾಗಲೇ ಜಿಲ್ಲಾಡಳಿತ ಆಯೋಜಿಸುವ ಕರಾವಳಿ ಉತ್ಸವದಿಂದಾಗಿ ಮಂಗಳ ಸ್ಟೇಡಿಯಂ ಸುತ್ತಮುತ್ತಲಿನ ಎಲ್ಲಾ ರಸ್ತೆಗಳಲ್ಲೂ ವಾಹನ ದಟ್ಟನೆ ವಿಪರೀತ ಏರಿಕೆಯಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ. ಕ್ರದಿ ಪಾರ್ಕ್, ತಣ್ಣೀರುಬಾವಿ ಯಲ್ಲೂ ಗಾಳಿಪಟ ಉತ್ಸವದಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಹಿಂದೆಯೂ ಆಹಾರ ಮೇಳದಿಂದಾಗಿ ಉಂಟಾದ ಅಡಚಣೆ, ಟ್ರಾಫಿಕ್ ಸಮಸ್ಯೆಗಳು ಜಿಲ್ಲಾಡಳಿತದ ಗಮನದಲ್ಲಿದ್ದರೂ ಮತ್ತದೇ ತಪ್ಪನ್ನು ಮುಂದುವರಿಸುತ್ತಿದೆ ಎಂದರೆ ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂದು ಜಿಲ್ಲಾಡಳಿತ ಉತ್ತರಿಸಬೇಕು. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಹಾರ ಮೇಳವನ್ನು ವಾಹನ ಸಂಚಾರ ಸಹಿತ ಯಾವುದೇ ಅಡಚಣೆಯಾಗದಂತಹ ಪರ್ಯಾಯ ಪ್ರದೇಶಕ್ಕೆ ಸ್ಥಳಾಂತರಿ ಸಬೇಕೆಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News