×
Ad

ಗಾಳಿಪಟ ಉತ್ಸವ ಮುಂದೆ ಸ್ಪರ್ಧೆಯಾಗಿ ಆಯೋಜಿಸಲು ಚಿಂತನೆ: ಸಚಿವ ದಿನೇಶ್ ಗುಂಡೂರಾವ್

Update: 2025-01-18 21:31 IST

ಮಂಗಳೂರು: ದ.ಕ. ಜಿಲ್ಲಾಡಳಿತವು ವಿವಿಧ ಸಂಸ್ಥೆಗಳ ಸಹಕಾರ ಹಾಗೂ ಟೀಮ್ ಮಂಗಳೂರು ಸಹಭಾಗಿತ್ವದಲ್ಲಿ ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ವಿದೇಶಿಗರ ಜತೆ ಜನಮನ್ನಣೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಉತ್ಸವವನ್ನು ಸ್ಪರ್ಧೆಯಾಗಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕರಾವಳಿ ಉತ್ಸವ ಹಿನ್ನೆಲೆಯಲ್ಲಿ ಒಎನ್ ಜಿಸಿ-ಎಂಆರ್ ಪಿಎಲ್ ಪ್ರಾಯೋಜಕತ್ವದಲ್ಲಿ ಆಯೋಜಿಸುತ್ತಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಳಿಪಟ ಉತ್ಸವದಲ್ಲಿ ವಿಶ್ವ ಮಟ್ಟದ ಚಾಂಪಿಯನ್‌ಗಳು ಪಾಲ್ಗೊಳ್ಳುತ್ತಿರುವುದಲ್ಲದೆ, ಗಾಳಿಪಟ ಉತ್ಸವ ಆಯೋಜಿಸಲು ಪೂರಕ ವಾತಾವರಣ ಇರುವುದಲ್ಲದೆ, ಮಂಗಳೂರಿನ ಬೀಚ್‌ಗಳು ಗಮ್ಯ ತಾಣ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿ ದ್ದಾರೆ. ಇದು ಮಂಗಳೂರನ್ನು ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಣೆಯ ತಾಣವಾಗಿಸಲು ಪೂರಕವಾಗಿದ್ದು, ಜಿಲ್ಲೆಯಲ್ಲಿ ಪ್ರತಿ ವರ್ಷ ನಿಗದಿತ ಟೂರಿಸಂ ಕ್ಯಾಲೆಂಡರ್ ತಯಾರಿಸಿ ಈ ರೀತಿಯ ಉತ್ಸವಗಳ ಮೂಲಕ ಇಲ್ಲಿನ ಕ್ರೀಡೆ, ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸುವಕೆಲಸ ಆಗಬೇಕು ಎಂದರು.

ಟೀಮ್ ಮಂಗಳೂರು ಉತ್ತಮ ಕಾರ್ಯ ಮಾಡುತ್ತಿದ್ದು, ಜಿಲ್ಲಾಡಳಿತ ಅವರ ಜತೆಗಿದೆ. ಅವರ ಕಾರ್ಯಕ್ಕೆ ಆತ್ಮವಿಶ್ವಾಸ ತುಂಬುವ ಜತೆಗೆ ತಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಇರುವವರೆಗೆ ಇಂತಹ ಉತ್ಸವಗಳನ್ನು ಮಂಗಳೂರಿನ ಶಾಶ್ವತ ವೈಶಿಷ್ಟ್ಯಗಳನ್ನಾಗಿಸಲು ಕ್ರಮ ವಹಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಬಳಿಕ ಮಾತಾಡಿದ ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು, ಗಾಳಿಪಟ ಉತ್ಸವದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೆಂಬಲ ಸಿಗುತ್ತದೆ. ಇಂದು ಮತ್ತು ನಾಳೆ ಸಾವಿರಾರು ಮಂದಿ ಆಸಕ್ತರು, ಪ್ರವಾಸಿಗರು ಇಲ್ಲಿ ನೆರೆಯುತ್ತಾರೆ. ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ. ಇದಕ್ಕೆ ಜನಪ್ರತಿನಿಧಿಗಳು ವಿವಿಧ ಇಲಾಖೆಗಳು ಮಾತ್ರವಲ್ಲದೆ ಜನರು ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮೇಯರ್ ಮನೋಜ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಎಂಆರ್ ಪಿಎಲ್ ನಿರ್ದೇಶಕ ನಂದಕುಮಾರ್, ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಎಸ್ಪಿ ಯತೀಶ್, ಟೀಮ್ ಮಂಗಳೂರಿನ ಸರ್ವೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗಾಳಿಪಟಗಳಿಂದ ಕಂಗೊಳಿಸಿದ ತಣ್ಣೀರುಬಾವಿ ಬಾನಂಗಳ!

ಸಂಜೆ 4 ಗಂಟೆಯ ವೇಳೆಗಾಗಲೇ ದೇಶವಿದೇಶದ ಗಾಳಿಪಟ ಹಾರಾಟಗಾರರು ಬಣ್ಣ ಬಣ್ಣದ, ವಿವಿಧ ಗಾತ್ರ, ವಿವಿಧ ವಿನ್ಯಾಸದ ಚಿತ್ರ ವಿಚಿತ್ರ ಹಾಗೂ ವಿಶೇಷ ಗಾಳಿಪಟಗಳನ್ನು ಹಾರಿಸುತ್ತಾ ತಣ್ಣೀರುಬಾವಿ ಕಡಲ ಕಿನಾರೆಯ ಬಾನಂಗಳದ ತುಂಬೆಲ್ಲಾ ಚಿತ್ತಾರ ಮೂಡಿಸಿದ್ದರು.

ಬೃಹತ್ ಗಾತ್ರದ ಚಿರತೆ, ಅಕ್ಟೋಪಸ್, ಕುದುರೆ, ಬಾತುಕೋಳಿ, ಹುಲಿ, ಗರುಡ ಹೀಗೆ ವೈವಿಧ್ಯಮಯ, ಆಕರ್ಷಕ ಬೆಲೂನ್ ಮಾದರಿಯ ಗಾಳಿಪಟಗಳು ಹಾರುತ್ತಿದ್ದರೆ, ಸಂಜೆಯ ವೇಳೆಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಬೀಚ್‌ನಲ್ಲಿ ಸೇರಿದ್ದ ಪ್ರೇಕ್ಷಕರು ಮಕ್ಕಳು ಬಾನಂಗಳವನ್ನು ದಿಟ್ಟಿಸುತ್ತಾ ಸಮಯ ಕಳೆದರು. ಟೀಮ್ ಮಂಗಳೂರು ತಂಡದ ‘ಸಿಗ್ನೇಚರ್ ಗಾಳಿಪಟ’ವಾದ ಸಾಂಪ್ರದಾಯಿಕ ಶೈಲಿಯ ಕಥಕ್ಕಳಿ ತನ್ನ ಎಂದಿನ ಗಾಂಭೀರ್ಯತೆಯೊಂದಿಗೆ ಉತ್ಸವಕ್ಕೆ ಮೆರುಗು ನೀಡಿದೆ. ಗಾಳಿಪಟ ಉತ್ಸವ ವೀಕ್ಷಣೆಗಾಗಿ ತಣ್ಣೀರು ಬಾವಿ ಕಡಲ ಕಿನಾರೆಗೆ ಆಗಮಿಸಿದ್ದ ಸಾವಿರಾರು ಮಂದಿ ಪ್ರೇಕ್ಷಕರು, ಪ್ರವಾಸಿಗರು ಕೂಡಾ ಬೃಹತ್ ಗಾತ್ರದ ಗಾಳಿಪಟಗಳ ಎದುರು ವೀಡಿಯೋ ಚಿತ್ರೀಕರಣ, ಫೋಟೋ, ಸೆಲ್ಫಿ ಕ್ಲಿಕ್ಕಿಸಿದರೆ, ಗಾಳಿ ಪಟ ಹಾರಾಟಕ್ಕೆ ಬಂದಿದ್ದ ವಿದೇಶದ ಗಾಳಿಪಟ ಚಾಂಪಿಯನ್‌ಗಳು ಕೂಡಾ ಮಂಗಳೂರಿನ ಕಡಲ ಕಿನಾರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ಗಾಳಿಪಟ ಕುಟುಂಬವೇ ಇಲ್ಲಿದೆ

‘ನಾನು ಕಳೆದ ಸುಮಾರು 10 ವರ್ಷಗಳಿಂದಲೂ ಅಧಿಕ ಸಮಯದಿಂದ ಹಲವು ದೇಶಗಳಲ್ಲಿನ ಗಾಳಿಪಟ ಉತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ಭಾರತದ ಗಾಳಿಪಟ ಉತ್ಸವದಲ್ಲೂ ಭಾಗಿಯಾಗುತ್ತಿದ್ದು, ಮಂಗಳೂರಿಗೂ ಬರುತ್ತಿದ್ದೇನೆ. ಮಂಗಳೂರಿನಲ್ಲಿ ನನ್ನ ಗಾಳಿಪಟ ಕುಟುಂಬವೇ ಇದೆ’ ಎನ್ನುತ್ತಾ ಟೀಮ್ ಮಂಗಳೂರು ತಂಡವನ್ನು ಶ್ಲಾಘಿಸಿದರು ನೆದರ್‌ಲ್ಯಾಂಡ್‌ನ ರೇಮಂಡ್ ಇ. ಡೆ ಗ್ರಾಫ್.

ನೆದರ್‌ಲ್ಯಾಂಡ್‌ನಿಂದ ಜ. 3ಕ್ಕೆ ಮುಂಬೈಗೆ ಆಗಮಿಸಿದ್ದು, ಅಲ್ಲಿಂದ ಮೋಟಾರು ಬೈಕ್‌ನಲ್ಲಿ ಗೋವಾ ಹಾಗೂ ಇನ್ನಿತರ ಕಡೆಗಳಿಗೆ ಭೇಟಿ ನಿನ್ನೆ ಮಂಗಳೂರಿಗೆ ಆಗಮಿಸಿದ್ದೇನೆ. ಸೋಮವಾರ ಇಲ್ಲಿಂದ ಬೈಸಿಕಲ್‌ನಲ್ಲಿ ಮುಂಬೈಗೆ ತೆರಳಿ ಅಲ್ಲಿ ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಬಳಿಕ ನನ್ನ ದೇಶಕ್ಕೆ ಹಿಂತಿರುಗಲಿದ್ದೇನೆ ಎಂದವರು ಹೇಳಿದರು.

ಅಮೆರಿಕದ ಹಿಮದ ರಾಶಿಯಲ್ಲೂ ಗಾಳಿಪಟ ಹಾರಿಸಿದ್ದೇವೆ

‘ಫ್ರಾನ್ಸ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗಾಳಿಪಟಗಳನ್ನು ಹಾರಿಸಿದ್ದೇವೆ. ಅಮೆರಿಕದಲ್ಲಿ ಹಿಮದ ರಾಶಿಯ ನಡುವೆ ನಡೆದ ಗಾಳಿಪಟ ಉತ್ಸವದಲ್ಲಿ ನಾನು ಹಾಗೂ ಪತಿ ಭಾಗವಹಿಸಿದ್ದೆವು. ಎರಡು ವರ್ಷಗಳ ಹಿಂದೆ ಅಹ್ಮದಾ ಬಾದ್‌ನ ಗಾಳಿಪಟ ಉತ್ಸವದಲ್ಲೂ ಭಾಗಿಯಾಗಿದ್ದೆವು. ಮಂಗಳೂರಿಗೆ ಇದು ನಮ್ಮ ಪ್ರಥಮ ಭೇಟಿ. ಇಲ್ಲಿ ಜನರು, ಇಲ್ಲಿನ ಪ್ರಶಾಂತ ವಾತಾವರಣ ನಮಗೆ ತುಂಬಾ ಹಿಡಿಸಿದೆ. ಇನ್ನು ಮುಂದೆ ನಾವು ಪ್ರತಿ ವರ್ಷ ಇಲ್ಲಿ ಭೇಟಿ ನೀಡಲಿದ್ದೇವೆ’ ಎನ್ನುತ್ತಾರೆ ಇಂಗ್ಲೆಡ್‌ನ ನಿವಾಸಿ, ತನ್ನ ಪತಿ ಟೈವ್ ಅವರ ಜತೆ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿರುವ ಕ್ಲಿಯಾ.

ಗಾಳಿಪಟ ಹಾರಾಟಗಾರರ ಜತೆ ಸಚಿವರ ಮಾತುಕತೆ

ಉದ್ಘಾಟನೆಗೆ ಆಗಮಿಸಿದ್ದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿದೇಶಿಯರು ಸೇರಿದಂತೆ ಗಾಳಿಪಟ ಹಾರಾಟ ಗಾರರ ಜತೆ ಮಾತುಕತೆ ನಡೆಸಿ ಅವರಿಂದ ಸಲಹೆಗಳನ್ನು ಪಡೆದುಕೊಂಡರು. ಗಾಳಿಪಟ ಹಾರಿಸಲು ತಣ್ಣೀರುಬಾವಿ ಬೀಚ್ ಸೂಕ್ತ ಪ್ರದೇಶವಾಗಿದ್ದು, ಈ ಉತ್ಸವ ಮುಂದುವರಿಸುವಂತೆಯೂ ಗಾಳಿಪಟ ಹಾರಾಟಗಾರರು ಸಚಿವರಿಗೆ ಮನವಿ ಮಾಡಿದರು.

ಗಾಳಿಪಟ ಉತ್ಸವದಲ್ಲಿ ಇಂಗ್ಲೆಂಡ್, ಜರ್ಮನಿ, ನೆದರ್‌ಲ್ಯಾಂಡ್, ಸ್ಟೋವೆನಿಯಾ, ಇಟೆಲಿ, ಇನ್ನೋನಿಯ, ಸ್ವೀಡನ್, ಇಂಡೋನೇಶಿಯಾ, ಪೋರ್ಚುಗಲ್ ಸಹಿತ ಒಡಿಸ್ಸಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದಲೂ ಗಾಳಿಪಟ ಹಾರಾಟಗಾರರು ಆಗಮಿಸಿದ್ದಾರೆ. ರವಿವಾರ ಸಂಜೆಯೂ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಾಳಿಪಟ ಉತ್ಸವ ನಡೆಯಲಿದೆ.















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News