×
Ad

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ತಮಿಳುನಾಡಿನಿಂದ ಇಬ್ಬರು ಆರೋಪಿಗಳನ್ನು ಕರೆತರುತ್ತಿರುವ ಪೊಲೀಸರು

Update: 2025-01-22 21:25 IST

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್ ಬಳಿ ಜ.17ರಂದು ನಡೆದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ತಮಿಳುನಾಡಿನಿಂದ ಕರೆತರಲಾಗುತ್ತಿದೆ. ಅದಕ್ಕೂ ಮೊದಲು ತಮಿಳ್ನಾಡಿನ ನ್ಯಾಯಾಲಯಕ್ಕೆ ದರೋಡೆಕೋರರನ್ನು ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಕೃತ್ಯಕ್ಕೆ ಸಂಬಂಧಿಸಿದಂತೆ ತಮಿಳುನಾಡಿದ ಅಮ್ಮನಕೋವಿಲ್ ನಿವಾಸಿ ಮುರುಗಂಡಿ ತೇವರ್ (36), ಮುಂಬೈಯ ಗೋಪಿನಾಥ್ ಚೌಕ ನಿವಾಸಿ ಯೋಸುವಾ ರಾಜೇಂದ್ರನ್ (35), ಮುಂಬೈ ಚೆಂಬೂರ್‌ನ ತಿಲಕ್‌ನಗರದ ಕಣ್ಣನ್ ಮಣಿ (36) ಎಂಬವರನ್ನು ಜ.20ರಂದು ಬಂಧಿಸಲಾಗಿತ್ತು. ಈ ಪೈಕಿ ಮಂಗಳವಾರ ಸ್ಥಳ ಮಹಜರು ನಡೆಸುವ ವೇಳೆ ಕಣ್ಣನ್ ಮಣಿ ಎಂಬಾತ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಪೊಲೀಸರು ಆತನ ಕಾಲಿಗೆ ಗುಂಡು ಹಾಕಿ ವಶಕ್ಕೆ ಪಡೆದಿದ್ದರು. ಇದೀಗ ಆತ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಉಳಿದ ಇಬ್ಬರು ದರೋಡೆಕೋರರಾದ ತಮಿಳ್ನಾಡಿನ ಮುರುಗಂಡಿ ತೇವರ್ ಮತ್ತು ಮುಂಬೈಯ ಯೋಸುವಾ ರಾಜೇಂದ್ರನ್ ಎಂಬವರನ್ನು ಬುಧವಾರ ತಮಿಳುನಾಡಿನ ತಿರುನೆಲ್ವೆಲಿ ಜಿಲ್ಲೆಯ ಅಂಬಸಮುತ್ರಮ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೆ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಕರೆ ತರಲಾಗುತ್ತಿದೆ.

ದರೋಡೆಕೋರರಿಂದ ಫಿಯೆಟ್ ಕಾರು, ಎರಡು ಪಿಸ್ತೂಲು, 4 ಲೈವ್ ಬುಲೆಟ್ಸ್, ಮೂರು ಲಕ್ಷ ರೂ. ನಗದು, 2 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News