ಕೊಣಾಜೆ| 'ಶಾಲೆಯ ಬಳಿ ಗುಡ್ಡ ಕುಸಿತದ ಭೀತಿ, ದಯವಿಟ್ಟು ಸರಿಪಡಿಸಿ'
ಕೊಣಾಜೆ: ಶಾಲೆಯ ಬಳಿ ಗುಡ್ಡ ಕುಸಿಯುವ ಹಂತದಲ್ಲಿದ್ದು, ಮಳೆಗಾಲದಲ್ಲಿ ವಿದ್ಯಾರ್ಥಿಗಳೆಲ್ಲರೂ ಭೀತಿಯಿಂದಲೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದಯವಿಟ್ಟು ತಡೆಗೋಡೆಯನ್ನು ನಿರ್ಮಿಸಿ ಆತಂಕವನ್ನು ದೂರಗೊಳಿಸಿ ಎಂದು ಕೊಣಾಜೆ ಪದವು ಶಾಲೆಯ ವಿದ್ಯಾರ್ಥಿನಿ ಫಾತಿಮತ್ ಧೈಫಾ ಅಳಲು ತೋಡಿಕೊಂಡಳು.
ಗುರುವಾರದಂದು ಕೊಣಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಆಯೋಜಿಸ ಲಾಗಿತ್ತು. ಸಭೆಯಲ್ಲಿ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಪರಿಸರದ ಸಮಸ್ಯೆಯ ಬಗ್ಗೆ ಅಳವತ್ತುಕೊಂಡರು.
ಗುಡ್ಡ ಕುಸಿತದ ಭೀತಿಯ ಬಗ್ಗೆ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಅವರು, ಈ ಬಗ್ಗೆ ಕೂಡಲೇ ಸಮಸ್ಯೆಯ ಬಗ್ಗೆ ಸಂಬಧಪಟ್ಟ ಇಲಾಖೆ, ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವಿಶ್ವಮಂಗಳ ಶಾಲೆಯ ವಿದ್ಯಾರ್ಥಿನಿ ಅನನ್ಯಾ ಅವರು, ಶಾಲೆಯ ಪರಿಸರದಲ್ಲಿ ಕೆಲವರು ದೂಮಪಾನ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದಾಗ, ಇದಕ್ಕೆ ಉತ್ತರಿಸಿದ ಪಿಡಿಒ ಇವತ್ತೇ ಶಾಲೆಯ ಪರಿಸರಕ್ಕೆ ಭೇಟಿ ನೀಡಿ ಸ್ಪಾಟ್ ಚೆಕ್ ಮಾಡಿ ಶೀಘ್ರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಯುಬಿಎಂಸಿ ಶಾಲೆಯ ರಝಿಮಾ ಶಾಲೆಯ ಬಳಿ ವಾಹನಗಳು ಅತಿ ವೇಗವಾಗಿ, ಭಯಾನಕವಾಗಿ ಹೋಗುತ್ತವೆ ಆದ್ದರಿಂದ ರಸ್ತೆ ಗೆ ಹಂಪ್ಸ್ ಅಳವಡಿಸಿ ಎಂದು ಬೇಡಿಕೆ ಸಲ್ಲಿಸಿದರೆ, ವಿದ್ಯಾರ್ಥಿನಿ ನಿಧಿಶ್ರೀ ಶಾಲೆಯ ಪರಿಸರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೀಟ್ ಪೋಲೀಸರು ಬಂದು ಹೋಗುವ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಳು.
ಅಡ್ಕರೆ ಪಡ್ಪು ಶಾಲೆಯ ವಿದ್ಯಾರ್ಥಿನಿ ಆಯಿಷತ್ ಶಿಫಾ ಅಡ್ಕರೆ ಪಡ್ಪು ಬಳಿ ಹೆಚ್ಚು ಬಸ್ ಓಡಾಟ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಹೆಚ್ಚಿನ ಬಸ್ ಸೌಲಭ್ಯ ಒದಗಿಸಿ ಎಂದು ಬೇಡಿಕೆಯಿಟ್ಟಳು.
ಕೊಣಾಜೆ ಪದವು ಶಾಲೆಯ ವಿದ್ಯಾರ್ಥಿ ಡೆಲ್ವಿನ್ ಮೋಸೆಸ್ ಮಾತನಾಡಿ ನಮ್ಮ ಶಾಲೆಯ ಬಳಿ ಕಸದ ತೊಟ್ಟಿ ಇಲ್ಲದೆ ಕಸಗಳ ರಾಶಿ ತುಂಬುತ್ತವೆ. ಆದ್ದದ್ದರಿಂದ ಕಸದ ತೊಟ್ಟಿ ಅಳವಡಿಸಿ ವಿದ್ಯಾರ್ಥಿಗಳೇ ಅದರ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದಾಗ ಸಭಿಕರಿಂದ ಚಪ್ಪಾಳೆ ಸದ್ದು ಕೇಳಿಸಿತು.
ಹೀಗೆ ಕೊಣಾಜೆ ಗ್ರಾಮದಲ್ಲಿ ಮಕ್ಕಳ ಗ್ರಾಮಸಭೆಯಲ್ಲಿ ಅನೇಕ ಶಾಲೆಯ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಪ್ರಶ್ನೆಗಳ ಸುರಿಮಳೆಗೈದರು. ಬಳಿಕ ಪಂಚಾಯತಿ ಅಧಿಕಾರಿಗಳು ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಉತ್ತರಿಸಿ ಬಗೆ ಹರಿಸುವ ಭರವಸೆ ನೀಡಿದರು.
ಸಭೆಯಲ್ಲಿ ಎಪಿಡಿ ಫೌಂಡೇಶನ್ ನ ಗೀತಾ ಅವರು ಸ್ವಚ್ಚ ಭಾರತ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆನ್ನು ಕೊಣಾಜೆ ಪದವು ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಯಜ್ಞೇಶ್ ಅವರು ವಹಿಸಿ ಮಾತನಾಡಿ, ಅಧಿಕಾರಿಗಳು ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಿರಿ, ಹಾಗೆಯೇ ಅದನ್ನು ಅನುಷ್ಠಾನಗೊಳಿಸಬೇಕು ಎಂಬುದು ನಮ್ಮೆಲ್ಲರ ಬೇಡಿಕೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಮಂಗಳೂರು ವಿವಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ವಿನುತಾ ಪಂಚಾಯತಿ ಸದಸ್ಯ ರವಿ, ಅಂಗನವಾಡಿ ಮೇಲ್ವೀಚಾರಕಿ ನಳಿನಿ, ಪಂಚಾಯತಿ ಸದಸ್ಯ ಇಕ್ಬಾಲ್, ಪಂಚಾಯತಿ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ಪಂಚಾಯತಿ ಕಾರ್ಯದರ್ಶಿ ಚಿತ್ರಾ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಅವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
"ಇಂದಿನ ಮಕ್ಕಳೇ ನಾಳೆಯ ಸುಂದರ ಭವಿಷ್ಯ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಡ ಬೇಕಾದರೆ ಮೊಬೈಲ್ ನಿಂದ ದೂರವಿದ್ದು ಅದರ ಬಳಕೆಯ ಬಗ್ಗೆ ಎಚ್ಚರವಹಿಸಿ. ಮೊಬೈಲ್ ಅತಿಯಾದ ಬಳಕೆಯಿಂದಾಗಿ ವಿದ್ಯಾರ್ಥಿಗಳ ವರ್ತನೆಗಳಲ್ಲಿ ಬದಲಾವಣೆಗಳಾಗುತ್ತಿವೆ. ಕೇರಳ ಶಾಲೆಗಳಂತೆ ಕರ್ನಾಟಕದ ಶಾಲೆಗಳಲ್ಲೂ ಆಪ್ತಸಮಾಲೋಚಕರ ನೇಮಕವಾಗಬೇಕಿದೆ".
-ವಿನುತಾ, ಉಪನ್ಯಾಸಕಿ,ಮಂಗಳೂರು ವಿವಿ