ಗುರುವಪ್ಪ ಬಾಳೆಪುಣಿ ನೆನಪಿನಲ್ಲಿ ಶಾಶ್ವತ ಯೋಜನೆಗೆ ಚಿಂತನೆ: ಹರೀಶ್ ರೈ
ಮಂಗಳೂರು: ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರ ಹೆಸರು ಶಾಶ್ವತವಾಗಿ ಉಳಿಯುವ ಸಲುವಾಗಿ ವಾರ್ಷಿಕ ಪ್ರಶಸ್ತಿ ಅಥವಾ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಹಿರಿಯ ಪತ್ರಕರ್ತರ ಹಾಗೂ ಸಂಘದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದಿ. ಗುರುವಪ್ಪ ಎನ್.ಟಿ. ಬಾಳೇಪುಣಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನದ ವೇಳೆ ಈ ವಿಷಯ ತಿಳಿಸಿದರು.
ಮಂಗಳೂರು ಪ್ರೆಸ್‌ಕ್ಲಬ್‌ನ ಏಳಿಗೆಗೆ ಬಾಳೇಪುಣಿ ಅವರು ಕೊಡುಗೆ ನೀಡಿದ್ದಾರೆ. ಸಂಘದ ಅಜೆಂಡಾ, ಲೆಕ್ಕಾಚಾರ ಕರಾರುವಕ್ಕಾಗಿ ಇರಬೇಕು ಎಂಬುದು ಅವರ ಆಶಯವಾಗಿತ್ತು. ಬಾಳೇಪುಣಿ ಅವರ ಇಚ್ಚೆಯಂತೆ ಅವರ ಪುಸ್ತಕವನ್ನು ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ಬಾಳೆಪುಣಿ ಜತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.
ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಕಾರಿ ಖಾದರ್ ಶಾ ಮಾತನಾಡಿ, ಸರಕಾರಿ ಇಲಾಖೆಗಳ ಜತೆಗೆ ಬಾಳೇಪುಣಿ ಅವರು ಉತ್ತಮ ಒಡನಾಟ ಹೊಂದಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ಉತ್ಸವ ಸಮಿತಿ, ಅಬ್ಬಕ್ಕ ರಾಣಿ ಉತ್ಸವ ಸಮಿತಿಗಳಿಗೆ ನಿರ್ದಿಷ್ಟ ಚೌಕಟ್ಟು ಒದಗಿಸುವಲ್ಲಿ ಪತ್ರಕರ್ತನಾಗಿ ಬಾಳೆಪುಣಿಯವರ ಛಲ ಅಪರಿಮಿತ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಜನಪದ ಸಹಿತ ವಿವಿಧ ವಿಷಯಗಳಲ್ಲಿ ಆಳವಾದ ಒಳನೋಟದ ಜ್ಞಾನ ಹೊಂದಿದ್ದ ಬಾಳೆಪುಣಿ ಪ್ರಶ್ನೆ ಮಾಡುವ, ನೇರವಾಗಿ ಬರೆಯುವ ವ್ಯಕ್ತಿತ್ವ ಉಳಿಸಿಕೊಂಡ ಅಗ್ರಮಾನ್ಯ ಪತ್ರಕರ್ತ ಎಂದರು.
ಹೊಸ ದಿಗಂತ ಪತ್ರಿಕೆ ಸಿಇಒ ಪಿ.ಎಸ್. ಪ್ರಕಾಶ್, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ, ಪತ್ರಕರ್ತ ಭಾಸ್ಕರ ರೈ ಕಟ್ಟ, ಬಾಳೇಪುಣಿ ಅವರ ಅಣ್ಣನ ಮಗ ಸುಧೀರ್ ನುಡಿ ನಮನ ಸಲ್ಲಿಸಿದರು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಬಾಳೇಪುಣಿ ಅವರ ಪುತ್ರ ಮನೇಶ ಬಾಳೇಪುಣಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಈ ವೇಳೆ ಬಾಳೇಪುಣಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಕಿತ್ತಳೆ ಮಾರುತ್ತಿದ್ದ ನನ್ನನ್ನು ಮೊದಲ ಬಾರಿಗೆ ಪರಿಚಯಿಸಿದ್ದು, ನಂತರ ಎಲ್ಲರೂ ಪರಿಚಯಿಸುವಂತೆ ಮಾಡಿದ್ದು ಗುರುವಪ್ಪ ಬಾಳೆಪುಣಿ. ಅಂದಿನಿಂದ ಇಲ್ಲಿವರೆಗೆ ನನ್ನ ಎಲ್ಲ ಕಷ್ಟ ಸುಖಗಳಿಗೆ ಬಾಳೆಪುಣಿ ಬೆನ್ನೆಲುಬಾಗಿದ್ದರು. ನನ್ನ ಈಗಿನ ಎಲ್ಲ ಏಳ್ಗೆಗೆ ಮೂಲ ಕಾರಣ ಬಾಳೆಪುಣಿಯವರು ನನ್ನ ಬಗ್ಗೆ ಮೊದಲು ಬರೆದ ಲೇಖಕ. ಅವರು ಬೇಗನೆ ಇತಲೋಕ ತ್ಯಜಿಸಿರುವುದು ತುಂಬಲಾರದ ನಷ್ಟ ಎಂದರು.