ಮಂಗಳೂರು ಮಹಾನಗರ ಪಾಲಿಕೆ| ಬಿಜೆಪಿ ಆಡಳಿತದಲ್ಲಿ ಟಿಡಿಆರ್ ಹಗರಣ ಆರೋಪ: ಸಿಪಿಎಂ ಹೋರಾಟದ ಎಚ್ಚರಿಕೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕಳೆದೊಂದು ವರ್ಷದ ಬಿಜೆಪಿ ಆಡಳಿತದಲ್ಲಿ ನಡೆದ ಟಿಡಿಆರ್ ಹಗರಣದ ಬಗ್ಗೆ ತನಿಖೆ ನಡೆಸದಿದ್ದರೆ ಹೋರಾಟ ಮಾಡುವುದಾಗಿ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.
ಐದು ವರ್ಷಗಳ ಆಡಳಿತದ ಕೊನೆಯ ತಿಂಗಳಿನಲ್ಲಿಯೂ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪದವು ಗ್ರಾಮದ 3.50 ಎಕರೆ ಜಮೀನಿನ ಟಿ.ಡಿ.ಆರ್ ಹಗರಣದ ಕಡತವನ್ನು ಗುರುವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಗಾಗಿ ಮಂಡಿಸಿದೆ. ಜನಾಕ್ರೋಶದ ಕಾರಣದಿಂದ ಎಚ್ಚೆತ್ತ ವಿಪಕ್ಷ ಸದಸ್ಯರು ಅನುಮೋದನೆ ನೀಡಲು ನಿರಾಕರಿಸಿ ಬಲವಾದ ಆಕ್ಷೇಪ ಎತ್ತಿದ್ದರೂ ಅವುಗಳನ್ನು ಕಡೆಗಣಿಸಿದ ಬಿಜೆಪಿ ಆಡಳಿತವು ಪದವು ಗ್ರಾಮದ ಟಿ.ಡಿ.ಆರ್ ಕಡತವನ್ನು ಪಾಸ್ ಮಾಡಿದೆ.
ಬಿಜೆಪಿಯ ನಗರ ಪಾಲಿಕೆ ಆಡಳಿತದ ಈ ಭ್ರಷ್ಟ ನಡೆಯನ್ನು ಸಿಪಿಎಂ ಬಲವಾಗಿ ಖಂಡಿಸುತ್ತದೆ.. ರಿಯಲ್ ಎಸ್ಟೇಟ್ ಲಾಬಿಗೆ ಸೇರಿದ ಪಚ್ಚನಾಡಿ ಹಾಗೂ ಮರಕಡದ ತಲಾ 11 ಎಕರೆ ನಿರುಪಯೋಗಿ ಜಮೀನಿನ ಟಿ.ಡಿ.ಆರ್ ಹಗರಣವು ಆಕ್ರೋಶಕ್ಕೆ ಕಾರಣ ಆಗಿದೆ. ಈ ಎರಡು ಕಡತಗಳು ಈಗ ರಾಜ್ಯ ಸರಕಾರ ಮುಂದಿದೆ. ಕಾಂಗ್ರೆಸ್ ಸರಕಾರವು ಈ ಟಿ.ಡಿ.ಆರ್ ಒಪ್ಪಂದಗಳನ್ನು ರದ್ದುಗೊಳಿಸಬೇಕು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.