×
Ad

ಸಂದೇಶ ಪ್ರತಿಷ್ಠಾನದಿಂದ ಮಾನವತಾವಾದದ ಸಂದೇಶ: ಡಾ.ಟಿ.ಎಸ್.ನಾಗಭರಣ

Update: 2025-02-10 20:21 IST

ಮಂಗಳೂರು: ಪ್ರಪಂಚದಾದ್ಯಂತ ಕ್ಷೋಭೆಗಳು ತಾಂಡವಾಡುತ್ತಿರುವ ಮಧ್ಯೆಯೂ ಪರಸ್ಪರ ಪ್ರೀತಿಸುವ, ವಿಶ್ವಾಸ ವ್ಯಕ್ತಪಡಿಸುವ ವಾತಾವರಣವೂ ಇದೆ ಎಂಬುದನ್ನು ಸಂದೇಶ ಪ್ರತಿಷ್ಠಾನ ಸಾರುತ್ತಿವೆ. ಅದಕ್ಕೆ ಪೂರಕ ಎಂಬಂತೆ ಸಮಾಜದ ನಾನಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಮಾನವತಾವಾದದ ಸಂದೇಶವನ್ನು ಪ್ರತಿಷ್ಠಾನ ಸಾರುತ್ತಿದೆ ಎಂದು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಡಾ.ಟಿ.ಎಸ್.ನಾಗಭರಣ ಹೇಳಿದರು.

ಕರ್ನಾಟಕ ಪ್ರಾಂತೀಯ ಕೆಥೊಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ನಗರದ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ - ಸಂದೇಶದ ವತಿಯಿಂದ ವಿವಿಧ ಕ್ಷೇತ್ರದ 10 ಮಂದಿ ಸಾಧಕರಿಗೆ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಸೋಮವಾರ ನಡೆದ ಸಂದೇಶ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ನಾಡಿನ ಪ್ರತಿಷ್ಠಿತ ಪ್ರಶಸ್ತಿಗೂ ಅರ್ಜಿ ಹಾಕುವ ಅನಿವಾರ್ಯತೆ ಇದೆ. ಆದರೆ ಸಂದೇಶ ಪ್ರಶಸ್ತಿಗೆ ಅದಕ್ಕೆ ಹೊರತಾ ಗಿದೆ. ಕಳೆದ 34 ವರ್ಷದಿಂದ ಆಯ್ಕೆ ಸಮಿತಿಯೇ ನಾನಾ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಿರುವುದು ಇದರ ವೈಶಿಷ್ಟ್ಯವಾಗಿದೆ. ಸಾಂಸ್ಕೃತಿಕ ವೇದಿಕೆಯೊಂದು ಸಮ-ಸಮಾಜ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಕವಿ ಬಿ.ಆರ್.ಲಕ್ಷ್ಮಣರಾವ್ ಜ್ಞಾನಪೀಠ ಪುರಸ್ಕೃತರಾದ ಕುವೆಂಪು ಅವರ ಮಾನವೀಯ ಮೌಲ್ಯ, ಸೌಹಾರ್ದ ಬದುಕು, ಸಹಜೀವನದ ಕನಸನ್ನು ಸಂದೇಶ ಪ್ರತಿಷ್ಠಾನವು ಅನುಷ್ಠಾನಗೊಳಿಸುತ್ತಿದೆ. ಈ ಪ್ರಶಸ್ತಿಗೆ ತನ್ನದೇ ಆದ ಹಿರಿಮೆ ಇದೆ. ಸಮಾಜದಲ್ಲಿ ಈ ಪ್ರಶಸ್ತಿ ಪುರಸ್ಕೃತರ ಗೌರವ ಹೆಚ್ಚುತ್ತಿರುವುದನ್ನು ಗಮನಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

*ಚಿತ್ರರಂಗದ ಸಾಧನೆಗಾಗಿ ಗಿರೀಶ ಕಾಸರವಳ್ಳಿಗೆ ಸಂದೇಶ ಕಲಾ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಯೆನೆಪೊಯ ಅಬ್ದುಲ್ಲ ಕುಂಞಿಗೆ, ಸಂದೇಶ ಸಾಹಿತ್ಯ ಪ್ರಶಸ್ತಿ ಕನ್ನಡ ಭಾಷೆಗಾಗಿ ಬಿ.ಆರ್.ಲಕ್ಷ್ಮಣರಾವ್‌ಗೆ, ಕೊಂಕಣಿ ಭಾಷೆಗಾಗಿ ಐರಿನ್ ಪಿಂಟೊಗೆ, ತುಳು ಭಾಷೆಗಾಗಿ ಡಾ. ಗಣೇಶ್ ಅಮಿನ್ ಸಂಕಮಾರ್‌ಗೆ, ಸಂದೇಶ ಮಾಧ್ಯಮ ಪ್ರಶಸ್ತಿಯು ಡಿ.ವಿ.ರಾಜ ಶೇಖರ್‌ಗೆ, ಕೊಂಕಣಿ ಸಂಗೀತ ಪ್ರಶಸ್ತಿಯು ರೋಶನ್ ಡಿಸೋಜರಿಗೆ, ವಿಶೇಷ ಪ್ರಶಸ್ತಿಯು ಡಾ.ಕೆ.ವಿ.ರಾವ್‌ಗೆ, ಮೈಕಲ್ ಡಿಸೋಜಗೆ ಸಂದೇಶ ವಿಶೇಷ ಗೌರವ ಪ್ರಶಸ್ತಿ ಮತ್ತು ರಮೋನ ಇವೆಟ್ ಪಿರೇರಾರಿಗೆ ವಿಶೇಷ ಯುವ ಪ್ರತಿಭಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿವಮೊಗ್ಗ ಬಿಷಪ್ ಅ. ವಂ.ಡಾ.ಫ್ರಾನ್ಸಿಸ್ ಸೆರಾವೊ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಬೆಳ್ತಂಗಡಿ ಬಿಷಪ್ ಅ.ವಂ. ಡಾ. ಲಾರೆನ್ಸ್ ಮುಕ್ಕುಯಿ, ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.

ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್‌ನ ನಿರ್ದೇಶಕ ವಂ. ಸುದೀಪ್ ಪೌಲ್ ಸ್ವಾಗತಿಸಿದರು. ಐರಿನ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News