ಕುಂಜತ್ತಬೈಲ್: ಮಗುವಿನೊಂದಿಗೆ ತಾಯಿ ನಾಪತ್ತೆ
ಮಂಗಳೂರು, ಫೆ.11: ನಗರದ ಕುಂಜತ್ತಬೈಲು ಬಸವನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಾದೇವಿ ಯಾನೆ ಕರಿಯಮ್ಮ (25) ಮತ್ತು ಆಕೆಯ ಮಗಳು ಕಾವೇರಿ (4) ಕಾಣೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾದೇವಿಗೆ 7 ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಕೆರೂರಿನ ಹಾಲಿಗೇರಿ ನಿವಾಸಿ ವೆಂಕಪ್ಪನೊಂದಿಗೆ ಮದುವೆ ಮಾಡಲಾಗಿತ್ತು. 2 ವರ್ಷದ ಹಿಂದೆ ಗಲಾಟೆಯಾದ ಕಾರಣ ಕುಳಾಯಿಯ ಅಣ್ಣನ ಮನೆಗೆ ಬಂದು ಇಬ್ಬರು ಮಕ್ಕಳೊಂದಿಗೆ ಮಹಾದೇವಿ ವಾಸವಾಗಿದ್ದಳು. ಫೆ.2ರಂದು ರಾತ್ರಿ 10ಕ್ಕೆ ಅತ್ತಿಗೆಯೊಂದಿಗೆ ಗಲಾಟೆಯಾಗಿದ್ದು, ಬಳಿಕ ಆಕೆಯನ್ನು ಸಂಬಂಧಿ ಕರೊಬ್ಬರು ಕುಂಜತ್ತಬೈಲಿನಲ್ಲಿರುವ ಬಸವನಗರಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಫೆ.8ರಂದು ಮಹಾದೇವಿಯ ದೊಡ್ಡ ಮಗಳು ಕುಳಾಯಿಯ ಶಾಲೆಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ, ಸಣ್ಣ ಮಗಳೊಂದಿಗೆ ಮಹಾದೇವಿ ಮನೆ ಯಿಂದ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
4.5 ಅಡಿ ಎತ್ತರದ, ಗೋಧಿ ಬಣ್ಣದ, ಸಾಧಾರ ಮೈಕಟ್ಟಿನ, ಹಸಿರು ಸೀರೆ ಮತ್ತು ಕಪ್ಪು ರವಿಕೆ ಧರಿಸಿರುವ ಮಹಾದೇವಿ ಕನ್ನಡ ಬಲ್ಲವಳಾಗಿದ್ದಾಳೆ. ಮಗು ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಹಸಿರು ಬಣ್ಣದ ಫ್ರಾಕ್ ಧರಿಸಿದೆ. ಈ ಚಹರೆಯ ತಾಯಿ ಮತ್ತು ಮಗಳು ಕಂಡು ಬಂದಲ್ಲಿ ಕಾವೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.