ಬೈಕ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಪಡುಬಿದ್ರಿ: 20ದಿನಗಳ ಹಿಂದೆ ಪಡಿಬಿದ್ರಿ ಪೇಟೆಯಲ್ಲಿ ಬುಲೆಟ್ ಬೈಕ್ ಕಳ್ಳತನಕ್ಕೆ ಸಂಬಂಧಿಸಿ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಿವಮೊಗ್ಗ ಜಿಲ್ಲೆಯ ಸೂಳೆಬೈಲು ನಿವಾಸಿ ರುಹಾನ್, ಶಿವಮೊಗ್ಗದ ಗೋಪಾಲ ನಿವಾಸಿ ತಾಜುದ್ದೀನ್ ಪಿ.ಕೆ ಯಾನೆ ತಾಜು ಎಂದು ಗುರುತಿಸಲಾಗಿದೆ. ಬಂಧಿತರಿಂದ ಪಡುಬಿದ್ರಿಯಲ್ಲಿ ಕಳವು ಮಾಡಿದ ಬುಲೆಟ್ ಮತ್ತು ಕಳ್ಳತನ ಸಮಯ ಉಪಯೋಗಿಸಿದ ಕಾರನ್ನು ಸ್ವಾಧೀನ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆಯ ವಿವರ: ಜನವರಿ 21ರಂದು ರಾತ್ರಿ ಮುಂಡ್ಕೂರು ನಿವಾಸಿ ಪರೀಕ್ಷಿತ್ ಶೆಟ್ಟಿ ಎಂಬವರು ಪಡುಬಿದ್ರಿ ಪೇಟೆಯಲ್ಲಿ ಬುಲೆಟ್ ಬೈಕ್‍ನ್ನು ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ ಕೆಲಸ ಮುಗಿಸಿ ವಾಪಸ್ ಬಂದು ನೋಡಿದಾಗ ಅಲ್ಲಿ ಬೈಕ್ ಇರಲಿಲ್ಲ. ಬೈಕನ್ನು ಕಳವು ಮಾಡಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗದಲ್ಲಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.
ವಿವಿಧ ಪ್ರಕರಣಗಳು: ಆರೋಪಿ ತಾಜುದ್ದೀನ್ ಮೇಲೆ ಶಿವಮೊಗ್ಗ ಜಿಲ್ಲೆಯ ಕೋಟೆ, ವಿನೋಬ ನಗರ, ತುಂಗಾ ನಗರ, ದೊಡ್ಡಪೇಟೆ, ಆಗುಂಬೆ ಪೊಲೀಸ್ ಠಾಣೆಗಳಲ್ಲಿ ದರೋಡೆ, ವಿದ್ಯಾರ್ಥಿಯ ಅಪಹರಣ, ವಾಹನ ಕಳವು, ಸಾಗರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದರೋಡೆ ಮತ್ತು ವಾಹನ ಕಳ್ಳತನ, ಹಾಸನ ಜಿಲ್ಲೆಯಲ್ಲಿ ದರೋಡೆ ಮತ್ತು ಮನೆ ಕಳವು ಪ್ರಕರಣ, ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಮತ್ತು ಮನೆ ಕಳವು ಪ್ರಕರಣಗಳು ದಾಖಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಇತ್ತು.
ಆರೋಪಿ ರುಹಾನ್ ವಿರುದ್ಧ ಬೆಂಗಳೂರು ಜಿಲ್ಲೆಯ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳವು, ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಅಪಹರಣ ಮತ್ತು ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.