×
Ad

ʼಪುನೀತ್ ರಾಜ್ ಹೃದಯ ಜ್ಯೋತಿ ಯೋಜನೆʼ ರಾಜ್ಯದಾದ್ಯಂತ ವಿಸ್ತರಣೆ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

Update: 2025-02-15 22:05 IST

ಮಂಗಳೂರು, ಫೆ.15: ರಾಜ್ಯದಲ್ಲಿ ಕೆಲವು ತಾಲೂಕು ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ಪುನೀತ್ ರಾಜ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕುಗಳಿಗೆ ವಿಸ್ತರಿಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ , ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದ ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ, ಪಾಲಿಕೆ ಸಿಬ್ಬಂದಿ ವಸತಿ ಗೃಹ, ಬಸ್ ತಂಗುದಾಣ ಮತ್ತಿತರ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಉದ್ಘಾಟಿಸಿ ಮಾತನಾಡಿದರು.

ತಾಯ- ಮಕ್ಕಳ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ. ತಾನು ಉಸ್ತುವಾರಿ ಸಚಿವನಾಗಿ ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರದ ಅಭಿವೃದ್ಧಿಗೆ ಬದ್ಧನಾಗಿದ್ದು, ಬಜೆಟ್‌ನಲ್ಲಿ ಇಲ್ಲಿಗೆ ಬೇಕಾದ ಯೋಜನೆಗಳ ಬಗ್ಗೆ ಸೋಮವಾರ ಕೆಡಿಪಿ ಸಭೆಯಲ್ಲಿ ಚರ್ಚಿಸಲಿರುವುದಾಗಿ ಅವರು ಹೇಳಿದರು.

*ವೆನ್‌ಲಾಕ್ ಆಸ್ಪತ್ರೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ದ.ಕ. ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆ ಯಾಗಿ ಅಭಿವೃದ್ಧಿ ಮಾಡಬೇಕೆನ್ನುವುದು ಹಲವು ವರ್ಷಗಳ ಬೇಡಿಕೆ ಯಾಗಿದ್ದು. ಈ ನಿಟ್ಟಿನಲ್ಲೂ ಚಿಂತನೆ ನಡೆಯುತ್ತಿದೆ. ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು ತಜ್ಞರು ಶೀಘ್ರವೇ ಆಗಮಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಡಯಾಲಿಸಿಸ್ ಸೌಲಭ್ಯ ದಲ್ಲಿ ಸುಧಾರಣೆ ಆಗಿದೆ. ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಆರಂಭಿಸಿದ್ದು, ಬೇಕಾದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಯೋಜನೆ ಉದ್ಘಾಟನೆ ಆಗಬೇಕಾದರೆ ಉಸ್ತುವಾರಿ ಸಚಿವರನ್ನು ಕರೆಯೋದು ಶಿಷ್ಟಾಚಾರ. ಅದನ್ನು ಮುರಿಯುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ಆರೋಗ್ಯ ಸಚಿವರ ಇಲಾಖೆಗೇ ಸೇರಿದ ಕಾಮಗಾರಿಯನ್ನು ಅವರಿಗೇ ಹೇಳದೆ ಉದ್ಘಾಟಿಸೋದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಹರೀಶ್ ಕುಮಾರ್, ಜೆ.ಆರ್. ಲೋಬೊ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕಾರ್ಪೊರೇಟರ್ಗಳಾದ ಶಶಿಧರ ಹೆಗ್ಡೆ, ಅನಿಲ್ ಕುಮಾರ್, ಎ.ಸಿ. ವಿನಯರಾಜ್, ಲತೀಫ್, ಅಬ್ದುಲ್ ರವೂಫ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉಪಸ್ಥಿತರಿದ್ದರು.

ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು. ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ. ವಂದಿಸಿದರು. ಶಿಕ್ಷಕಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿದರು.

ಎರಡನೇ ಬಾರಿಗೆ ಕಾಮಗಾರಿಗಳ ಉದ್ಘಾಟನೆ!

ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಾರ್ಯಗತಗೊಳಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ, ಕಾರ್ಪೋರೇಶನ್ ಕ್ವಾಟರ್ಸ್ ಮತ್ತು ಬಸ್‌ಬೇಗಳ ಉದ್ಘಾಟನೆಯನ್ನು ಬಿಜೆಪಿಯ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಕಳೆದ ರವಿವಾರ ಉದ್ಘಾಟಿಸಿದ್ದರು.

ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಥವಾ ಸಚಿವರ ಕಚೇರಿಗೂ ಮಾಹಿತಿ ನೀಡದೆ ಉದ್ಘಾಟಿಸಿದ್ದನ್ನು ಪ್ರಶ್ನಿಸಿ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು.

ಇದರ ಬೆನ್ನಲ್ಲೇ ಸಚಿವರು ಇಂದು ಸ್ವತಃ ಆಗಮಿಸಿ ಉದ್ಘಾಟನೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು, ಸಂಸದರು, ಮೇಯರ್, ಸ್ಥಳೀಯ ಕಾರ್ಪೊರೇಟರ್ ಗೈರು ಹಾಜರಾಗಿದ್ದರು.

2-3 ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವನಲ್ಲ: ನಾನು 2-3 ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವನಲ್ಲ. ಆಗಾಗ ಬರುತ್ತಿರುತ್ತೇನೆ. ಉದ್ಘಾಟನೆಗೆ ದಿನಾಂಕ ಗೊತ್ತುಪಡಿಸುವಂತೆ ಕೇಳುವ ಸೌಜನ್ಯವೂ ಇವರಿಗೆ ಇಲ್ಲದಿದ್ದರೆ ನಾಗರಿಕ ವರ್ತನೆ ಅನ್ನಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಹಮ್ಮಿಕೊಂಡಿದ್ದ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ಕೇಂದ್ರ ಬಿಜೆಪಿ ಸಚಿವರೂ ಭಾಗವಹಿಸಿದ್ದರು. ಅಭಿವೃದ್ಧಿ ಕಾರ್ಯಗಳು ಕೇವಲ ಒಬ್ಬರಿಗೆ ಸೇರಿದ್ದಲ್ಲ. ಅದರ ಹೆಗ್ಗಳಿಕೆ ನಮಗಷ್ಟೇ ಸಿಗಬೇಕು ಎಂದು ಬಯಸುವುದು ಕೀಳು ರಾಜಕಾರಣ. ಇನ್ಮುಂದೆ ಯಾವುದೇ ಕಾರಣಕ್ಕೂ ಇಂಥ ಅನಗತ್ಯ ಗೊಂದಲ, ಮುಜುಗರ ಸೃಷ್ಟಿಸುವ ಕೆಲಸ ನಡೆಯಬಾರದು ಎಂದರು.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News