×
Ad

ಮನಪಾದಲ್ಲಿ ಈ ಬಾರಿ ನೀರು ರೇಶನಿಂಗ್ ಅನಿವಾರ್ಯತೆ ಬಾರದು: ಮೇಯರ್ ಮನೋಜ್ ಕುಮಾರ್

Update: 2025-02-25 18:16 IST

ಮಂಗಳೂರು, ಫೆ.25: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ಡ್ಯಾಂನಲ್ಲಿ ಇನ್ನೆರಡು ತಿಂಗಳಿಗೆ ಬೇಕಾಗುವಷ್ಟು ನೀರು ಸಂಗ್ರಹವಿದೆ. ಮಳೆಯ ನಿರೀಕ್ಷೆಯೂ ಇರುವ ಕಾರಣ ನೀರು ರೇಶನಿಂಗ್ ಮಾಡುವ ಅನಿವಾರ್ಯತೆ ಬಾರದು ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.

ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಮಂಗಳವಾರ ಗಂಗಾಪೂಜೆ ನಡೆಸಿ, ಬಾಗಿನ ಅರ್ಪಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೇತ್ರಾವತಿ ನದಿಯು ನಮ್ಮೆಲ್ಲರಿಗೆ ನೀರುಣಿಸುವ ನಂಬಿಕೆಯ ಜೀವನದಿ. ಕಳೆದ ವರ್ಷವೂ ನೀರಿನ ಸಮಸ್ಯೆ ಉಂಟಾಗಿ ರಲಿಲ್ಲ. ನೀರು ರೇಶನಿಂಗ್ ಮಾಡಬೇಕಾದರೆ ಮಾತ್ರ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಹುದು. ಆದರೆ, ಈಗಿನ ಪರಿಸ್ಥಿತಿ ಗಮನಿಸಿದಾಗ ಈ ಬಾರಿ ನೀರು ರೇಶನಿಂಗ್ ಮಾಡುವ ಅಗತ್ಯವಿಲ್ಲ. ಡ್ಯಾಂನ ಕೆಳಭಾಗದಿಂದ ನೀರೆತ್ತುವ ಅವಕಾಶವೂ ಇದೆ ಎಂದರು.

ಜಲಸಿರಿ ಯೋಜನೆಯಲ್ಲಿ 720 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ 24 ಗಂಟೆ ನೀರು ಸರಬರಾಜು ನಡೆಯಲಿದೆ ಎಂದು ತಿಳಿಸಿದರು.

ಮನಪಾ ಪ್ರತಿಪಕ್ಷ ನಾಯಕ ಅನೀಲ್ ಕುಮಾರ್ ಮಾತನಾಡಿ 2003 ಹಾಗೂ 2019ರಲ್ಲಿ ನೀರಿನ ಕೊರತೆ ಆಗಿರುವು ದನ್ನು ನಾವು ತಿಳಿದಿದ್ದೇವೆ. ಅಂತಹ ಪರಿಸ್ಥಿತಿ ಇನ್ನೆಂದೂ ಬರಬಾರದು. ಸದ್ಯ ಒಣಹವೆ ಅಧಿಕವಾಗಿದೆ. ಸೆಖೆ ಬಹಳಷ್ಟು ಜಾಸ್ತಿಯಾಗಿದೆ. ಹೀಗಾಗಿ ನೀರಿನ ಬಳಕೆ ಏರಿಕೆಯಾಗುವ ಸಾಧ್ಯತೆ ಇದೆ. ಮೂರು ದಿನದೊಳಗೆ ಪಾಲಿಕೆ ಆಡಳಿತ ಅಧಿಕಾ ರಾವಧಿ ಮುಕ್ತಾವಾಗಲಿದೆ. ಆ ಬಳಿಕ ಅಧಿಕಾರಿ ವರ್ಗ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ವಿಶೇಷ ಆದ್ಯತೆ ನೀಡಬೇಕಿದೆ ಎಂದರು.

ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಮಾತನಾಡಿ, ಕುಡಿಯುವ ನೀರು ವಿತರಣೆಯಲ್ಲಿ ಮಂಗಳೂರು ಪಾಲಿಕೆಯು ನಂ.1 ಸ್ಥಾನದಲ್ಲಿದೆ. ಈ ಬಾರಿಯೂ ನೀರು ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಆಗಲಾರದು ಎಂಬ ನಂಬಿಕೆ ಇದೆ ಎಂದರು.

ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಮುಂದಿನ 3 ತಿಂಗಳು ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಲಾಗುವುದು ಎಂದರು.

ಉಪಮೇಯರ್ ಬಾನುಮತಿ, ಪ್ರತಿಪಕ್ಷ ನಾಯಕ ಪ್ರೆಮಾನಂದ ಶೆಟ್ಟಿ, ಮಾಜಿ ಮೇಯರ್‌ಗಳಾದ ಜಯಾನಂದ ಅಂಚನ್, ಭಾಸ್ಕರ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಕದ್ರಿ, ವೀಣಾಮಂಗಳ, ಸುಮಿತ್ರ ಕರಿಯ, ಸರಿತ ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News