ಪಿಎಚ್‌ಡಿ ಫೆಲೋಶಿಪ್ ಅನ್ನು ಮೂಲ ಸ್ವರೂಪದಲ್ಲಿಯೇ ಜಾರಿಗೊಳಿಸಿ: ಎಸ್.ಐ.ಓ ಒತ್ತಾಯ
ಮಂಗಳೂರು: ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಮತ್ತು ಪ್ರತಿಭೆಯ ಮೂಲಕ ಸಾಮಾಜಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇತ್ತೀಚಿನ ಸರ್ಕಾರದ ಬದಲಾದ ನೀತಿ-ಕಾರ್ಯಕ್ರಮಗಳಿಂದ ಡಾಕ್ಟರೇಟ್ ಅಧ್ಯಯನವನ್ನು ಕೈಗೊಂಡೀರುವ ಅನೇಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಈಗ ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಎಸ್.ಐ.ಓ ಕರ್ನಾಟಕ ತಿಳಿಸಿದೆ.
ರಾಜ್ಯ ಸರ್ಕಾರವು ಈ ಹಿಂದೆ ಅಲ್ಪಸಂಖ್ಯಾತ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾಸಿಕ 25,000 ರೂ. ಫೆಲೋಶಿಪ್ ನೀಡುತ್ತಿತ್ತು, ಅದನ್ನು ಈಗ 8,333 ರೂ.ಗೆ ಇಳಿಸಲಾಗಿದೆ. ಈ ಮಹತ್ವದ ಕಡಿತದಿಂದ ಸಂಶೋಧಕರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದು ಅವರ ಶೈಕ್ಷಣಿಕ ಅನ್ವೇಷಣೆಗಳಿಗೆ ಅಪಾಯವನ್ನುಂಟು ಮಾಡಿದೆ. ಡಾಕ್ಟರೇಟ್ ಅಧ್ಯಯನಗಳಿಗೆ ಪೂರ್ಣ ಸಮಯದ ಬದ್ಧತೆಯ ಅಗತ್ಯವಿರುತ್ತದೆ ಇದನ್ನು ಹಣಕಾಸಿನ ಬೆಂಬಲವಿಲ್ಲದೆ ಮುಂದುವರೆಸುವುದು ಕಷ್ಟಕರ. ಆದ್ದರಿಂದ ಅನೇಕ ಅರ್ಹ ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಯನ್ನು ತ್ಯಜಿಸಲು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಒಟ್ಟು ದಾಖಲಾತಿ ಅನುಪಾತ (GER) ಗಮನಾರ್ಹವಾಗಿ ಕಡಿಮೆಯಾಗಿದೆ. 2020-21 ರಂತೆ, ಮುಸ್ಲಿಮರ GER 8.91% ರಷ್ಟಿದೆ, ಇದು ರಾಷ್ಟ್ರೀಯ ಸರಾಸರಿ 27.1% ಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹಣಕಾಸಿನ ತೊಡಕು ಪ್ರಾಥಮಿಕ ತಡೆಗೋಡೆಯಾಗಿದ್ದು ಇದು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಲ್ಲಿ ಮುಂದುವರೆಯುವುದನ್ನು ತಡೆಯುತ್ತಿದೆ.
ಫೆಲೋಶಿಪ್‌ನಲ್ಲಿನ ಕಡಿತವು ಈ ಸಮಸ್ಯೆಯನ್ನು ಇನ್ನಷ್ಟು ಹದಗೇಡಿಸುತ್ತಿದೆ, ಇದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಮತ್ತಷ್ಟು ತಡೆಯಾಗುತ್ತಿದೆ ಎಂದು ಶೋಚನೀಯ. ಪಿ.ಎಚ್.ಡಿ ಫೆಲೋಶಿಪ್ ಅನ್ನು ತಡಮಾಡದೆ 25,000ಕ್ಕೆ ತುರ್ತಾಗಿ ಮರುಜಾರಿಗೊಳಿಸುವಂತೆ ಎಸ್‌ಐಒ ಕರ್ನಾಟಕ ಸರ್ಕಾರಕ್ಕೆ ಕರೆ ನೀಡುತ್ತಿದೆ.
ಅಲ್ಪಸಂಖ್ಯಾತ ಸಮುದಾಯಗಳಿಗೆ ಉನ್ನತ ಶಿಕ್ಷಣವನ್ನು ಬೆಂಬಲಿಸುವುದು ಸಾಮಾಜಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಅತ್ಯಗತ್ಯ. ಆರ್ಥಿಕ ಅಡೆತಡೆಗಳು ಶಿಕ್ಷಣ ಮತ್ತು ನಾವೀನ್ಯತೆಗೆ ಅಡ್ಡಿಯಾಗದಂತೆ ಖಾತ್ರಿಪಡಿಸಿಕೊಂಡು ಫೆಲೋಶಿಪ್ ಅನ್ನು ಮರುಜಾರಿಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಲು ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು SIO ಕರ್ನಾಟಕ PR ಕಾರ್ಯದರ್ಶಿ ಮೊಹಮ್ಮದ್ ಹಯ್ಯನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.