×
Ad

ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Update: 2025-02-28 20:14 IST

ಮಂಗಳೂರು, ಫೆ.28: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಎಸ್‌ಡಿಪಿಐ ದ.ಕ.ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ಜರುಗಿತು. ಅದಕ್ಕೂ ಮೊದಲು ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ಮೆರವಣಿಗೆ ನಡೆಯಿತು.

ಮೆರವಣಿಗೆಯುದ್ದಕ್ಕೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ದೇಶದಲ್ಲಿ 8.70 ಲಕ್ಷದಷ್ಟು ವಕ್ಫ್ ಆಸ್ತಿಗಳಿವೆ. ಅವುಗಳನ್ನು ಕಬಳಿಸುವುದಕ್ಕಾಗಿ ಕೇಂದ್ರ ಸರಕಾರ ನಡೆಸುವ ಹುನ್ನಾರ ಇದಾಗಿದೆ. ಅದನ್ನು ಸಂರಕ್ಷಿಸುವ ಉದ್ದೇಶ ಸರಕಾರಕ್ಕೆ ಇದ್ದಿದ್ದರೆ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತ ರರಿಗೆ ಸದಸ್ಯತ್ವ ನೀಡುತ್ತಿರಲಿಲ್ಲ ಎಂದರು.

ಯಾವ ಕಾರಣಕ್ಕೂ ಈ ಮಸೂದೆಯನ್ನು ಜಾರಿಗೊಳಿಸಲು ಬಿಡಲಾರೆವು. ಸರಕಾರ ಅದನ್ನು ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ. ವಕ್ಫ್ ನಮ್ಮ ರಕ್ತದಲ್ಲಿ ಬಂದುದು. ಅದು ಬೇರೆಯವರ ಸೊತ್ತಲ್ಲ. ನೀವು ಗುಂಡು ಹೊಡೆ ದರೂ, ಬಾಂಬ್ ಹಾಕಿದರೂ ನಾವು ಹೋರಾಟದಿಂದ ಹಿಂದೆ ಸರಿಯಲಾರೆವು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದರು.

ವಿಮ್ ರಾಷ್ಟ್ರೀಯ ನಾಯಕಿ ಶಾಹಿದಾ ತಸ್ನೀಮ್ ಮಾತನಾಡಿ ಕೇಂದ್ರದಲ್ಲಿರುವುದು ಮುಸ್ಲಿಂ ವಿರೋಧಿ, ಮಾನವ ವಿರೋಧಿ ಸರಕಾರವಾಗಿದೆ. ಮುಸ್ಲಿಮರನ್ನು ದಮನಿಸುವುದೇ ಕೇಂದ್ರ ಸರಕಾರದ ಉದ್ದೇಶವಾಗಿದೆ. ವಕ್ಫ್ ವಿಷಯದಲ್ಲಿ ಗಡಿಬಿಡಿ ಮಾಡಬೇಡಿ ಎನ್ನುವವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಂಧನವಾದಾಗ ಗಡಿಬಿಡಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ಅಫ್ಸರ್ ಕೋಡ್ಲಿಪೇಟೆ, ಅನ್ವರ್ ಸಾದಾತ್ ಬಜತ್ತೂರು, ಜಲೀಲ್ ಕೃಷ್ಣಾಪುರ ಮಾತನಾಡಿದರು.

ಮುಹಮ್ಮದ್ ಅಶ್ರಫ್ ಅಂಕಜಾಲ್, ಅಲ್ಫಾನ್ಸೋ ಪ್ರಾಂಕೋ, ರಿಯಾಝ್ ಕಡಂಬು, ಅಬ್ದುಲ್ ಮಜೀದ್ ತುಂಬೆ, ಅಥಾವುಲ್ಲಾ ಜೋಕಟ್ಟೆ, ವಿಕ್ಟರ್ ಮಾರ್ಟಿಸ್, ಝಾಹಿದ್ ಮಲಾರ್, ಫಾತಿಮಾ ನಸೀಮಾ, ಮಿಸ್ರಿಯಾ ಕಣ್ಣೂರು, ನಸ್ರಿಯಾ ಬೆಳ್ಳಾರೆ, ಝುಲೈಖಾ ಬಜ್ಪೆ, ನೌರಿನ್ ಆಲಂಪಾಡಿ, ನಿಶಾ ವಾಮಂಜೂರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಎಸ್‌ಡಿಪಿಐ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿದರು. ಸಿದ್ದೀಕ್ ವಂದಿಸಿದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. 




















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News