×
Ad

ಭಾರತದ ಫ್ಲೋರ್‌ ಬಾಲ್ ತಂಡದ ತರಬೇತುದಾರರಾಗಿ ಮಂಗಳೂರಿನ ಸೌಮ್ಯ ದೇವಾಡಿಗ ಆಯ್ಕೆ

Update: 2025-03-03 17:55 IST

ಮಂಗಳೂರು, ಮಾ.3: ಇಟೆಲಿಯಲ್ಲಿ ಮಾ.8ರಿಂದ 15ರವರೆಗೆ ನಡೆಯಲಿರುವ ‘ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ -2025’ರಲ್ಲಿ ಭಾರತ ದೇಶದ ಫ್ಲೋರ್‌ ಬಾಲ್ ತಂಡದ ತರಬೇತುದಾರರಾಗಿ ಕರ್ನಾಟಕದಿಂದ ಮಂಗಳೂರಿನ ಸೌಮ್ಯ ದೇವಾಡಿಗ ಆಯ್ಕೆಯಾಗಿದ್ದಾರೆ.

ಫ್ಲೋರ್‌ ಬಾಲ್ ತಂಡಕ್ಕೆ ಹಿಮಾಚಲ ಪ್ರದೇಶದಿಂದ ಇಬ್ಬರು ಮತ್ತು ಕರ್ನಾಟಕದಿಂದ ಸೌಮ್ಯ ಸೇರಿದಂತೆ ಒಟ್ಟು 3 ಮಂದಿ ಆಯ್ಕೆಯಾಗಿದ್ದಾರೆ.

ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ 8 ವಿಭಾಗದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು ಭಾರತೀಯರು ಸ್ನೋ ಬೋರ್ಡಿಂಗ್, ಸ್ನೋ ಶೂ, ಅಲ್ಪೈನ್ ಸ್ಕೇಟಿಂಗ್, ಕ್ರಾಸ್ ಕಂಟ್ರಿ, ಫ್ಲೋರ್‌ ಬಾಲ್ ಮತ್ತು ಫಿಗರ್ ಸ್ಕೇಟಿಂಗ್‌ನಲ್ಲಿ ಭಾಗವಹಿ ಸಲಿದ್ದಾರೆ. ತರಬೇತುದಾರರು ಮತ್ತು ಕ್ರೀಡಾಪಟುಗಳು ಸೇರಿದಂತೆ 78 ಮಂದಿ ಭಾರತ ತಂಡದಲ್ಲಿರುತ್ತಾರೆ ಎಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ್-ಕರ್ನಾಟಕ ಇದರ ದ.ಕ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಜೆ.ಶೆಟ್ಟಿಗಾರ್ ಸೋಮವಾರದಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೌಮ್ಯ ದೇವಾಡಿಗ ಅವರು ಸುರತ್ಕಲ್ ಚಿತ್ರಾಪುರದ ನಿವಾಸಿಯಾಗಿದ್ದು ಈಕೆ ಸುರತ್ಕಲ್‌ನ ಲಯನ್ಸ್ ಸ್ಪೆಷಲ್ ಸ್ಕೂಲ್‌ನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕೋಚ್ ಆಗಿ ಮೊದಲ ಅವಕಾಶ

ಸೌಮ್ಯ ದೇವಾಡಿಗ ಅವರು ಮಾತನಾಡಿ, ಫ್ಲೋರ್ ಹಾಕಿಯಲ್ಲಿ 2018ರಲ್ಲಿ ಕೇರಳಕ್ಕೆ ತರಬೇತುದಾರೆಯಾಗಿ ಹೋಗಿದ್ದೆ. ಅಲ್ಲಿ ತಂಡ ಬೆಳ್ಳಿ ಪದಕ ಪಡೆದಿತ್ತು. 2022ರಲ್ಲಿ ಯುನಿಫೈಡ್ ಫುಟ್ಬಾಲ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೋಚ್ ಆಗಿದ್ದೆ. ಇಲ್ಲಿ ತರಬೇತು ಪಡೆದು ಅಮೆರಿಕಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಲಯನ್ಸ್ ಸ್ಪೆಷಲ್ ಸ್ಕೂಲ್‌ನ ಲಿಖಿತಾ ಕಂಚಿನ ಪದಕ ಪಡೆದಿದ್ದರು. ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ದಾಖಲಾತಿಗಳ ವಿಳಂಬದಿಂದಾಗಿ ನನಗೆ ಅಮೆರಿಕಾಕ್ಕೆ ತೆರಳಲು ಸಾಧ್ಯ ವಾಗಿರಲಿಲ್ಲ. ಈ ಬಾರಿ ಇಟೆಲಿಯಲ್ಲಿ ನಡೆಯುವ ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ ಫ್ಲೋರ್‌ ಬಾಲ್‌ನ ತರಬೇತುದಾರೆಯಾಗಿ ಭಾರತ ತಂಡ ಮುನ್ನಡೆಸುವ ಅವಕಾಶ ಒದಗಿ ಬಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ಹೊಸದಿಲ್ಲಿ ಮತ್ತು ಗ್ವಾಲಿಯರ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಹಲವು ಸುತ್ತಿನ ಆಯ್ಕೆ ಶಿಬಿರಗಳ ಅನಂತರ ಅಂತಿಮವಾಗಿ ಫ್ಲೋರ್‌ಬಾಲ್‌ಗೆ 8 ಮಂದಿ ಕ್ರೀಡಾಪಟು ಗಳು ಮತ್ತು ಮೂವರು ಕೋಚ್‌ಗಳು ಆಯ್ಕೆಯಾಗಿದ್ದೇವೆ. ಇದೊಂದು ಹೆಮ್ಮೆಯ ಕ್ಷಣವಾಗಿದೆ. ನಾನು ಕಬಡ್ಡಿ ಆಟಗಾರ್ತಿ. ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡ ಬಳಿಕ ವಿಶೇಷ ಮಕ್ಕಳ ಜತೆ ಹಲವು ಆಟಗಳನ್ನು ಕಲಿತು ವಿಶೇಷ ತರಬೇತಿ ಪಡೆದೆ. ಫ್ಲೋರ್‌ ಬಾಲ್‌ನಲ್ಲಿ ವಿಶೇಷ ಆಸಕ್ತಿ ವಹಿಸಿ ಅದರಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾ ಬಂದಿ ದ್ದೇನೆ. ಅಂತಾರಾಷ್ಟ್ರೀಯವಾಗಿ ಮಹಿಳಾ ವಿಭಾಗದಲ್ಲಿ ಕೋಚ್ ಆಗಿ ಮಂಗಳೂರಿನಿಂದ ನಾನು ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಭಾರತ್-ಕರ್ನಾಟಕ ಕಾರ್ಯದರ್ಶಿ ನಾರಾಯಣ ಶೇರಿಗಾರ, ಕ್ರೀಡಾ ನಿರ್ದೇಶಕ ಬಿ.ಎಂ.ತುಂಬೆ, ಲಯನ್ಸ್ ಸ್ಪೆಷಲ್ ಸ್ಕೂಲ್‌ನ ಪ್ರಾಂಶುಪಾಲೆ ಪ್ರೇಮಾ ರಾವ್ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News