×
Ad

ಕಾಟಿಪಳ್ಳದಲ್ಲಿ ನೀರಿನ ಸಮಸ್ಯೆ: ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಆಯುಕ್ತರು

Update: 2025-03-06 20:30 IST

ಸುರತ್ಕಲ್‌: ಕಾಟಿಪಳ್ಳದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಕಾಂಗ್ರೆಸ್‌ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಕಾರ್ಯದರ್ಶಿ ಮುಹಮ್ಮದ್‌ ಶಮೀರ್‌ಕಾಟಿಪಳ್ಳ ಅವರ ನೇತೃತ್ವದಲ್ಲಿ ಜನರು ಇಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಅವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ವಿವರಿಸಿದರು.‌

ನೀರಿನ ಬೋರ್‌ವೆಲ್‌ನ ಕೇಬಲ್‌ ಸುಟ್ಟು ಹೋಗಿ 6ತಿಂಗಳಾಯಿತು. ಈ ಬಗ್ಗೆ ಜೆಇ ಅವರಿಗೆ ದೂರು ನೀಡಿದ್ದೆವು. ಅವರು ಈ ವರೆಗೂ ಸ್ಥಳ ಪರಿಶೀಲನೆಗೂ ಬಂದಿಲ್ಲ. ಆ ಬಳಿಕ ದಿನಕ್ಕೆ 6ಬಾರಿ ಫೋನ್‌ ಮಾಡಿದರೂ ಅವರು ಫೋನ್‌ ರಿಸೀವ್‌ ಮಾಡುವುದೇ ಇಲ್ಲ. ಹಾಗಾಗಿ ಮುಹಮ್ಮದ್‌ ಶಮೀರ್‌ ಕಾಟಿಪಳ್ಳ ಅವರ ನೇತೃತ್ವದಲ್ಲಿ ಸುಟ್ಟು ಹೋದ ಕೇಬಲ್‌ ತೆಗೆಸಿ ಹೊಸ ವಯರ್‌ ಹಾಕಲಾಯಿತು. ಈಗ ನೋಡಿದರೆ ಬೋರ್‌ವೆಲ್‌ ಕೆಟ್ಟು ಹೋಗಿದೆ. ಅದರಲ್ಲಿ ನೀರಿನ ಹರಿವೇ ಇಲ್ಲದಾಗಿದೆ. ಹಾಗಾಗಿ ನಮಗೆ ನೀರು ಸಿಗು ತ್ತಿಲ್ಲ. ‌ಈಗ ಟ್ಯಾಂಕರ್‌ನಲ್ಲಿ ನೀರು ಕೊಡುತ್ತಿದ್ದಾರೆ. ಆದರೆ ಅದು ಯಾವುದಕ್ಕೂ ಸಾಲುತ್ತಿಲ್ಲ ಎಂದು ಗ್ರಾಮಸ್ಥರಾದ ಅಬ್ದುಲ್‌ ಸಿರಾಜ್‌ ಅವಲತ್ತುಕೊಂಡರು.

ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಆಯುಕ್ತರಿಗೆ ಜನರು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದರು. ಮೂರು ದಿನಕ್ಕೆ ಒಂದು ಬಾರಿ ನೀರು ಬಿಡಲಾಗುತ್ತಿದೆ. ಕಾಟಿಪಳ್ಳ ಮೂರನೇ ವಾರ್ಡ್‌ಎತ್ತರ ಪ್ರದೇಶ ದಲ್ಲಿದ್ದು ನೀರಿನ ಹರಿವಿಗೆ ಸಮಸ್ಯೆಯಾಗಿದೆ. ದಿನಕ್ಕೆ 1-2ಗಂಟೆ ಮನಪಾದಿಂದ ನೀರು ಬಿಡಲಾಗುತ್ತಿದ್ದು, ಪ್ರಶರ್‌ ಇಲ್ಲದೆ ಎತ್ತರದ ಭಾಗಕ್ಕೆ ಬರುತ್ತಿಲ್ಲ. ಅಲ್ಲದೆ, ನೀರು ಕಾಟಿಪಳ್ಳ ಪ್ರದೇಶಕ್ಕೆ ಪ್ರವೇಶಿಸುವ ಮೊದಲೇ ನೀರನ್ನು ಬಂದ್‌ ಮಾಡಲಾಗುತ್ತದೆ. ಇಲ್ಲಿ ಮನಪಾದಿಂದ ಬೋರ್ವೆಲ್‌ ಕೊರೆಸಲಾಗಿದ್ದು, ಕಳೆದ 6ತಿಂಗಳಿಂದ ಅದು ಕೆಟ್ಟುಹೋಗಿದೆ. ದುರಸ್ತಿಗೆ ಮನವಿ ಮಾಡಿದರೂ ಈ ವರೆಗೂ ಮನಪಾ ದುರಸ್ತಿಗೆ ಮುಂದಾಗಿಲ್ಲ. ವಾಟರ್‌ಮೆನ್‌ಗೆ ನೀರಿನ ಬಗ್ಗೆ ದೂರು ನೀಲು ಕರೆ ಮಾಡಿದರೆ ಉಡಾಫೆಯಾಗಿ ಉತ್ತರಿಸು ತ್ತಾರೆ. ಮನಪಾ ಅಧಿಕಾರಿಗಳಿಗೆ ಫೋನ್‌ ಮಾಡಿ ಸಮಸ್ಯೆ ಹೇಳಿಕೊಳ್ಳುವ ಎಂದರೆ ಅವರು ಕರೆಗಳನ್ನೇ ಸ್ವೀಕರಿಸುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಮಾತನಾಡಿದ ಮಾಜಿ ಕಾರ್ಪೊರೇಟರ್‌ ಬಶೀರ್‌ ಅಹ್ಮದ್‌ ಅವರು, ನೀರಿನ ಸಮಸ್ಯೆ ಇತ್ತೀಚೆಗೆ ಉಂಟಾಗಿರುವಂತದ್ದಲ್ಲ. ಹಲವು ವರ್ಷದಿಂದ ಇದೆ. ನಾನು ಕಾರ್ಪೊರೇಟರ್‌ ಆಗಿದ್ದಾಗಿನಿಂದಲೂ ಈ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ಮಾಡಿ ಸುಸ್ತಾಗಿದೆ. ಮುಂದಿನ ದಿನಗಳಲ್ಲಾದರೂ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರ ವಾದರೆ ಸಾಕು ಎಂದು ನುಡಿದರು. ಒಟ್ಟಾರೆಯಾಗಿ ನಮ್ಮ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಯುಕ್ತರಲ್ಲಿ ಮನವಿ ಮಾಡಿಕೊಂಡರು.

ಬಳಿಕ ಮಾತನಾಡಿದ ಆಯುಕ್ತರು, ಕೆಟ್ಟುಹೋದ ಬೋರ್‌ವೆಲ್‌ ವೀಕ್ಷಿಸಿದ ಆಯುಕ್ತರು, ತಕ್ಷಣವೇ ಈ ಭಾಗದಲ್ಲಿ ಎರಡು ಬೋರ್‌ವೆಲ್‌ ಕೊರೆಸಲು ತಕ್ಷಣಕ್ಕೆ ಕ್ರಮವಹಿಸುವಂತೆ ಸುರತ್ಕಲ್‌ವಲಯದ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಅಲ್ಲದೆ, ಓರ್ವ ವಾಟರ್‌ಮೆನ್‌ ನೇಮಿಸಿಕೊಳ್ಳಲು ಸ್ಥಳದಲ್ಲೇ ಆದೇಶಿಸಿದ ಆಯುಕ್ತರು ಸೂಕ್ತ ಅಭ್ಯರ್ಥಿಗಳನ್ನು ಗ್ರಾಮಸ್ಥರು ಸೂಚಿಸುವಂತೆ ಸೂಚನೆ ನೀಡಿದರು.

"ಕಾಟಿಪಳ್ಳದಲ್ಲಿ ನೀರಿನ ಅಭಾವ ತುಂಬಾ ಇದೆ. ಕಾಟಿಪಳ್ಳ ಎತ್ತರದ ಪ್ರದೇಶವಾಗಿರುವ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಸ್ಥಳಕ್ಕೆ ಬಂದ ಆಯುಕ್ತರು ಎರಡು ಬೋರ್‌ವೆಲ್‌ಕೊರೆಸಲು ಸೂಚಿಸಿದ್ದಾರೆ. ಶಾಶ್ವತ ವಾಗಿ ನಮಗೆ ನೀರು ನೀಡುವಂತೆ ಗಮನಿಸಿ ಬೋರ್‌ವೆಲ್‌ಕೊರೆಸಬೇಕಿದೆ. ನಮ್ಮ ಸಮಸ್ಯೆ ಗಳನ್ನು ಆಯುಕ್ತರ ಮುಂದೆ ಇಟ್ಟಿದ್ದೇವೆ. ಸಮಸ್ಯೆಗಳನ್ನು ಬಗೆಹರಿಸುವುದಗಿ ಅವರೂ ಹೇಳಿದ್ದಾರೆ". ‌

-ವಿಠಲ್‌ ಶೆಟ್ಟಿಗಾರ್

"ಬೇಸಿಗೆ ಒಂದೆಡೆಯಾದರೆ ಉಪವಾಸದ ಸಮಯ ಬೇರೆ. ಕುಡಿಯುವ ನೀರು ನಮ್ಮ ಮೂಲಭೂತ ಸೌಕರ್ಯ ಗಳಲ್ಲಿ ಒಂದು. ಬೋರ್‌ವೆಲ್‌ ಕೊರೆಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. ಆವರೆಗೆ ನಮಗೆ ನೀರಿನ ಸಮಸ್ಯೆಯಾಗದ ರೀತಿಯಲ್ಲಿ ಮನಪಾ ಕ್ರಮ ವಹಿಸಬೇಕು".

- ನವಾಝ್‌ ಕಾಟಿಪಳ್ಳ 

"ನಮಗೆ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಇಲ್ಲಿ ಯಾವುದೇ ಬೊರ್ವೆಲ್‌ ಕೊರೆಸಿದರೂ ಬೇಸಿಗೆ ಯಲ್ಲಿ ನೀರಿನ ಸಮಸ್ಯೆ ಪರಿಹಾರವಾಗುವುದಿಲ್ಲ. ನಮಗೆ ತುಂಬೆಯ ನೀರಿನ ಸಂಪರ್ಕ ನೀಡಿದರೆ ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಕಡಿಮೆಯಾಗಿಸಲು ಸಾಧ್ಯ. ಇಲ್ಲವಾದಲ್ಲಿ ನೀರಿನ ಸಮಸ್ಯೆ ಇದೇ ರೀತಿ ಪ್ರತೀ ವರ್ಷವೂ ಮುಂದುವರಿಯಲಿದೆ".

-ಮುಹಮ್ಮದ್‌ ಶಮೀರ್‌ ಕಾಟಿಪಳ್ಳ




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News