ಗಂಗಾವತಿ ಅತ್ಯಾಚಾರ ಪ್ರಕರಣ: ವಿಮ್ ಆಕ್ರೋಶ
ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಗಂಗಾವತಿಯ ಸಾಣಾಪುರ ಬಳಿಯ ಆಘಾತಕಾರಿ ಅತ್ಯಾಚಾರ ಪ್ರಕರಣವೊಂದು ವರದಿಯಾಗಿದ್ದು ವಿಮೆನ್ ಇಂಡಿಯಾ ಮೂವ್ಮೆಂಟ್(WIM) ರಾಜ್ಯ ಸಮಿತಿಯು ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದಿನನಿತ್ಯ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳು ಇನ್ನು ಕೂಡ ಸರ್ಕಾರಗಳ ಕಣ್ಣು ತೆರೆಸಿಲ್ಲ ಎಂಬುದು ದುರಂತ. ದಿನಕಳೆಂದಂತೆ ಹೆಣ್ಣು ಸ್ವತಂತ್ರವಾಗಿ, ನಿರ್ಭೀತವಾಗಿ ಬದುಕುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾಳೆ. ನಾಗರಿಕ ಸಮಾಜ ತಲೆತಗ್ಗಿಸುಂತಹ ಇಂತಹ ಹೀನ ಕೃತ್ಯಗಳು ಕೊನೆಗೊಳ್ಳಬೇಕಾದರೆ ಇನ್ನೆಷ್ಟು ಮಹಿಳೆಯರು ಬಲಿಪಶುಗಳಾಗಬೇಕು ಎಂದು ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪ್ರಶ್ನಿಸಿದ್ದಾರೆ.
ವಿದೇಶೀ ಮಹಿಳೆಯ ಮೇಲೆ ನಡೆದ ಈ ದೌರ್ಜನ್ಯ ಪ್ರಕರಣವು ಅಂತಾರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಇದು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಇನ್ನಾದರೂ ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ,
ಸ್ತ್ರೀ ಸುರಕ್ಷತೆಯನ್ನು ಖಾತ್ರಿಪಡಿಸುವ, ಅತ್ಯಾಚಾರಿಗಳನ್ನು ಸದೆಬಡಿಯುವ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.