ಇರಿತಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಲು ಡಿವೈಎಫ್‌ಐ ಆಗ್ರಹ
ಮಂಗಳೂರು: ಬಜ್ಪೆಯಲ್ಲಿ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಜಿಲ್ಲೆಯಲ್ಲಿ ಹಲವೆಡೆ ಕೊಲೆಯತ್ನ ಪ್ರಕರಣಗಳು ನಡೆದಿದೆ. ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸರಕಾರ, ಪೊಲೀಸ್ ಇಲಾಖೆ ಕೂಡಲೇ ಸುಹಾಸ್ ಶೆಟ್ಟಿಯ ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು ಮತ್ತು ಶಾಂತಿ ಕದಡು ವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತ ಗಾಯಾಳುಗಳಿಗೆ ಪರಿಹಾರ ಒದಗಿಸಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕಣ್ಣೂರಿನಲ್ಲಿ ಚೂರಿ ಇರಿತಕ್ಕೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಶಾದ್‌ನ ಆರೋಗ್ಯ ಪರಿಸ್ಥಿತಿ ಬಗ್ಗೆ ಡಿವೈಎಫ್‌ಐ ಸಂಘಟನೆಯ ನಾಯಕರುಗಳ ನಿಯೋಗ ಭೇಟಿ ನೀಡಿ ವಿಚಾರಿಸಿ ಧೈರ್ಯ ತುಂಬಿದೆ. ಮಂಗಳೂರು ನಗರದ ಪೊಲೀಸ್ ಇಲಾಖೆಯ ದಯನೀಯ ವೈಫಲ್ಯದಿಂದ ನಗರ ದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಾಬ್ ಲಿಂಚಿಂಗ್ ಪ್ರಕರಣದಿಂದ ಎಚ್ಚೆತ್ತುಕೊಳ್ಳ ಬೇಕಾಗಿದ್ದ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳ ಕೈಗೊಳ್ಳದ ಕಾರಣ ಜಿಲ್ಲೆಯಲ್ಲಿ ಹಿಂಸಾಚಾರ ಹೆಚ್ಚಳ ಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದರೂ ದ.ಕ ಜಿಲ್ಲೆಯನ್ನು ಸಂಘಪರಿವಾರ ನಿಯಂತ್ರಣಕ್ಕೆ ಬಿಟ್ಟು ಕೊಟ್ಟಿದೆ ಎಂದರೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದೆ.
ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷ ನಿತಿನ್ ಕುತ್ತಾರ್, ಮಂಗಳೂರು ನಗರ ಸಮಿತಿ ಅಧ್ಯಕ್ಷ ಜಗದೀಶ್ ಬಜಾಲ್ ಆಸ್ಪತ್ರೆಗೆ ಭೇಟಿ ನೀಡಿದ ನಿಯೋಗದಲ್ಲಿದ್ದರು.