ಶಾಂತಿ ಕಾಪಾಡುವಂತೆ ಜಮಾಅತೆ ಇಸ್ಲಾಮಿ ಹಿಂದ್ ಮನವಿ
ಮಂಗಳೂರು: ಹೊರವಲಯದ ಕುಡುಪುವಿನಲ್ಲಿ ಅಶ್ರಫ್ ಗುಂಪು ಹತ್ಯೆಯ ಬೆನ್ನಲ್ಲೇ ಇದೀಗ ರೌಡಿಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದೆ. ಈ ಹತ್ಯೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ. ಹಾಗೂ ತಪ್ಪಿತಸ್ಥರನ್ನು ಶೀಘ್ರ ಬಂಧನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದೆ.
ಇತ್ತೀಚಿನ ದಿನಗಳಲ್ಲಿ ಶಾಂತವಾಗಿದ್ದ ಜಿಲ್ಲೆಯನ್ನು ಈ ಹತ್ಯೆಗಳು ಮತ್ತೊಮ್ಮೆ ಭೀತಿಯಲ್ಲಿ ಕೆಡವಿದೆ. ಹಿಂಸೆ ಯಿಂದ ಯಾರಿಗೂ ಒಳಿತಾಗುವುದಿಲ್ಲ. ಅಭಿವೃದ್ಧಿಯ ಕಾರಣಕ್ಕಾಗಿ ಸುದ್ದಿಯಲ್ಲಿರಬೇಕಾದ ಜಿಲ್ಲೆಯೊಂದು ಹತ್ಯೆಯ ಕಾರಣಕ್ಕೆ ಮತ್ತು ಹಿಂಸೆಯ ಕಾರಣಕ್ಕಾಗಿ ಸುದ್ದಿಯಲ್ಲಿರುವುದು ಅತ್ಯಂತ ಖೇದಕರ. ಆದ್ದರಿಂದ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಗಂಭೀರವಾಗಿ ಅವಲೋಕನ ನಡೆಸಬೇಕು. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನಡಕೊಳ್ಳಬೇಕಲ್ಲದೆ ಪೊಲೀಸ್ ಇಲಾಖೆ ಧರ್ಮ ಜಾತಿ ನೋಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಮುಖಂಡರು ಮತ್ತು ಸೌಹಾರ್ದ ಪ್ರೇಮಿಗಳು ಈ ಸಂದರ್ಭ ಮುಂಚೂಣಿಯಲ್ಲಿ ನಿಂತು ಶಾಂತಿ ಕಾಪಾಡಲು ಪ್ರಯತ್ನಿಸಬೇಕು. ಕೊಲೆಗಾರರಿಗೆ ಧರ್ಮವಿಲ್ಲ. ಅವರನ್ನು ಯಾವುದೇ ಧರ್ಮದ ಪ್ರತಿನಿಧಿಗಳಂತೆ ನೋಡದೆ ಸಮಾಜ ಘಾತುಕರಂತೆ ನೋಡುವ ವಿವೇಕವನ್ನು ಎಲ್ಲ ಪ್ರಜ್ಞಾವಂತ ನಾಗರಿಕರೂ ಪ್ರದರ್ಶಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿದೆ.