×
Ad

ಗುರುಪುರ: ದೈವಸ್ಥಾನದಲ್ಲಿ ಕಳ್ಳತನ

Update: 2025-05-06 17:49 IST

ಮಂಗಳೂರು: ಗುರುಪುರ ಮಠದಬೈಲಿನಲ್ಲಿ ಎರಡು ದೈವಸ್ಥಾನ, ಗುರುಪುರ ಹೈಸ್ಕೂಲ್ ಬಳಿಯ ಒಂದು ದೈವಸ್ಥಾನ ಹಾಗೂ ಮತ್ತೊಂದು ಮನೆಗೆ ಸೋಮವಾರ ರಾತ್ರಿ ಕಳ್ಳರು ನುಗ್ಗಿ ಚಿನ್ನದ ಸರಗಳು, ಕಾಣಿಕೆ ಡಬ್ಬ, ಬೆಳ್ಳಿಯ ಪರಿಕರ ಸಹಿತ ಲಕ್ಷಾಂತರ ರೂ ಮೌಲ್ಯದ ಸೊತ್ತು ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ತನ್ನ ಮನೆಯ ಕಾಂಪೌಂಡಿನೊಳಗೆ ಇರುವ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಕಲ್ಲುರ್ಟಿ ಮತ್ತು ಮಂತ್ರ ದೇವತೆಯ ಕುತ್ತಿಗೆಯಲ್ಲಿದ್ದ 75 ಸಾವಿರ ರೂ ಮೌಲ್ಯದ ಮೂರು ಚಿನ್ನದ ಕರಿಮಣಿ ಸರ ಹಾಗೂ ಕಾಣಿಕೆ ಡಬ್ಬದಲ್ಲಿದ್ದ ಸುಮಾರು 2,000 ರೂ. ಕದ್ದಿದ್ದಾರೆ ಎಂದು ಬಜ್ಪೆಪೊಲೀಸ್ ಠಾಣೆಗೆ ಮಠದಬೈಲಿನ ಗಣೇಶ್ ಕೊಟ್ಟಾರಿ ದೂರು ನೀಡಿದ್ದಾರೆ.

ತನ್ನ ಮನೆ ಕಾಂಪೌಂಡಿನಲ್ಲಿರುವ ದೈವಸ್ಥಾನದ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನ ನಡೆದಿದೆ. ಸುಮಾರು 3 ಗಂಟೆಯ ಹೊತ್ತಿಗೆ ಕಳ್ಳರು ದೈವಸ್ಥಾನದಲ್ಲಿ ಕಳವಿಗೆ ಯತ್ನಿಸಿದಾಗ ಎಚ್ಚರಗೊಂಡ ತಾನು ಹೊರಗೆ ಬರಲು ಪ್ರಯತ್ನಿಸಿದ್ದೆ. ಆದರೆ ಮನೆಯ ಎದುರು ಬಾಗಿಲಿಗೆ ಕಳ್ಳರು ಚಿಲಕ ಹಾಕಿರುವುದರಿಂದ ಹಿಂಬಾಗಿನ ಮೂಲಕ ಅಂಗಳಕ್ಕೆ ಬಂದಿದ್ದೆ. ಅಷ್ಟು ಹೊತ್ತಿಗೆ ಗಿಡ್ಡಗಿದ್ದ ವ್ಯಕ್ತಿಯೊಬ್ಬ ಮನೆಯಂಗಳದಿಂದ ಓಡಿ ಹೋಗಿದ್ದಾನೆ ಎಂದು ಶೋಧನ್ ಕುಮಾರ್ ದೂರು ನೀಡಿದ್ದಾರೆ.

ಗುರುಪುರ ಹೈಸ್ಕೂಲ್ ಬಳಿ ರಾಧಾ ಬೆಜ್ಜಬೆಟ್ಟು ಎಂಬವರ ಮನೆಯ ದೈವಸ್ಥಾನದ ಚಿಲಕ ಹೊಡೆದು ಸೊತ್ತಿಗಾಗಿ ಜಾಲಾಡಿದ್ದರೆ, ಗುಲಾಬಿ ಬೆಜ್ಜಬೆಟ್ಟು ಎಂಬವರ ಮನೆಯೊಳಗೆ ಇದ್ದ 30 ಸಾವಿರ ರೂ.ಮೌಲ್ಯದ ಬೆಳ್ಳಿಯ ಪರಿಕರ ಕಳ್ಳತನ ಆಗಿರುವ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News