×
Ad

ಡೆಂಗಿ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ

Update: 2025-05-16 20:12 IST

ಮಂಗಳೂರು: ಮಳೆಗಾಲದ ಆಗಮನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದ.ಕ. ಜಿಲ್ಲಾ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರಾಷ್ಟ್ರೀಯ ಡೆಂಗಿ ದಿನಾಚರಣೆಯ ಅಂಗವಾಗಿ ಶುಕ್ರವಾರ ನಗರದ ಹೊಯ್ಗೆ ಬಜಾರ್‌ನಲ್ಲಿ ಆಯೋಜಿಸಲಾ ಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗಿ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಕಳೆದ ವರ್ಷ ದ.ಕ.ಜಿಲ್ಲೆಯಲ್ಲಿ ಹೊತ್ತಿಗೆ 140 ಡೆಂಗಿ ಪ್ರಕರಣಗಳು ಪತ್ತೆಯಾಗಿತ್ತು. ಈ ವರ್ಷ 29 ಪ್ರಕರಣಗಳು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರ ಸಹಕಾರದಿಂದ ಮಾತ್ರ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯ ಎಂದರು.

ಮಳೆಗಾಲದಲ್ಲಿ ಡೆಂಗಿ ಸೊಳ್ಳೆಗಳು ಹೆಚ್ಚು ಉತ್ಪಾದನೆಯಾಗುತ್ತದೆ. ಅದರಲ್ಲೂ ನಿಂತ ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಡುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ನೀಡಬೇಕಾಗಿದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸರಕಾರದೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಸಚಿವರು ಹೊಯ್ಗೆ ಬಜಾರ್‌ನ ಧೂಮಾವತಿ ಕಾಂಪೌಂಡ್ ವ್ಯಾಪ್ತಿಯಲ್ಲಿ ನಡೆದ ಲಾರ್ವ ಸಮೀಕ್ಷೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ, ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News