ಸ್ವಾವಲಂಬನೆಯಿಂದ ಬದುಕು ಹಸನು: ಸ್ಪೀಕರ್ ಯು.ಟಿ.ಖಾದರ್
ಕೊಣಾಜೆ: ಸಮಾಜದಲ್ಲಿರುವ ಅನೇಕ ಸಂಘ ಸಂಸ್ಥೆಗಳು ಜನರ ಸ್ವಾವಲಂಬನೆಯ ಬದುಕಿಗೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ಸ್ವಾವಲಂಬನೆಯಿಂದ ಬದುಕು ಹಸನುಗೊಳ್ಳುತ್ತದೆ. ಟೈಲರಿಂಗ್ ತರಬೇತಿ ಪಡೆದ ವರು ತಂಡವಾಗಿ ಕಾರ್ಯನಿರ್ವಹಿಸಿದರೆ ಉದ್ಯಮದ ರೂಪ ನೀಡಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಆಶ್ರಯದಲ್ಲಿ ನಡೆದ ಸ್ವ ಉದ್ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಜೀವನಲ್ಲಿ ಒಮ್ಮಲೇ ಅಭಿವೃದ್ಧಿ ಕಾಣಲಸಾಧ್ಯ, ಪಡೆದ ತರಬೇತಿ ಆಸಕ್ತಿಯಿಂದ ಮುಂದುವರಿಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಯಶಸ್ಸು ಸಾಧ್ಯ. ತರಬೇತಿ ಪಡೆದಿರುವ ಅರ್ಹರ ಪಟ್ಟಿ ತಯಾರಿಸಿಟ್ಟರೆ ಅಲ್ಪಸಂಖ್ಯಾತ ಇಲಾಖೆಯಿಂದ ಟೈಲರಿಂಗ್ ಯಂತ್ರ ನೀಡಲು ಪ್ರಯತ್ನಿಸುತ್ತೇನೆ. 20 ಯಂತ್ರಗಳನ್ನು ಹಾಕಿ ಸಣ್ಣ ಉದ್ಯಮ ರೂಪಿಸಲು ಬ್ಯಾಂಕ್ ಅಥವಾ ಇತರ ರೂಪದಲ್ಲಿ ಸಹಾಯ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜಯ ಗ್ರಾಮೀಣ ಪ್ರತಿಷ್ಠಾನ 30 ವರ್ಷದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮ ಗಳನ್ನು ಆಯೋಜಿಸಿಕೊಂಡು ಮುನ್ನಡೆಯಿತ್ತಿದೆ ಎಂದರು.
ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಡಿ.ಕುಂದರ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಕಾರ್ಯನಿರ್ವಹಣಾಧಿಕಾರಿ ಎರಿಕ್ ಡಿಸೋಜ, ವಕ್ಫ್ ರಾಜ್ಯ ಸದಸ್ಯ ಅಬ್ದುಲ್ ರಹ್ಮಾನ್ ಕೊಣಾಜೆ, ಪಂಚಾಯತ್ ಮಾಜಿ ಅಧ್ಯಕ್ಷ ಶೌಕತ್ ಅಲಿ, ಸದಸ್ಯರಾದ ಇಕ್ಬಾಲ್, ಇಕ್ಬಾಲ್ ಕೊಣಾಜೆ, ಹಸನ್ ಕುಂಞಿ, ಹಬೀಬ್, ಪಂಡರಿನಾಥ್, ಅಮೀರ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳ ಗ್ರಾಮೀಣ ಸಂಘದ ಅಧ್ಯಕ್ಷರಾದ ಎ.ಕೆ.ಅಬ್ದುಲ್ ರಹ್ಮಾನ್ ಕೊಣಾಜೆ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಚ್ಚುತ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.