×
Ad

ಕರಾವಳಿಯ ಜನರಿಗೆ ಗೌರವಯುತವಾಗಿ ಬದುಕುವ ಗ್ಯಾರಂಟಿ ಕೊಡಿ: ಪೊಲೀಸ್ ವೈಫಲ್ಯದ ವಿರುದ್ಧ ಇನಾಯತ್ ಅಲಿ ಆಕ್ರೋಶ

Update: 2025-05-28 15:38 IST

ಮಂಗಳೂರು: ದ.ಕ. ಜಿಲ್ಲೆಯ ಜನರಿಗೆ ಮಿಕ್ಕ ಎಲ್ಲಾ ಗ್ಯಾರಂಟಿಗಳಿಗಿಂತ ಮೊದಲು ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ಗ್ಯಾರಂಟಿಯನ್ನು, ಶಾಂತಿಯುತ ವಾತಾವರಣವನ್ನು ನಿರ್ಮಿಸಿ ಕೊಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಅಮಾಯಕ ಯುವಕನ ಕೊಲೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ, ಕೋಮು ಸಂಘರ್ಷ ಹುಟ್ಟು ಹಾಕುವಂತಹ ಘಟನೆಗಳು ಜನರ ನೆಮ್ಮದಿ ಹಾಳುಗೆಡಹಿದೆ. ಶಾಂತಿಯ ವಾತಾವರಣವನ್ನು ಕೆಡಿಸಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರಗಳ ಭಾಗವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಿದ್ದಾರೆ.

ಪ್ರತಿಯೊಂದು ಘಟನೆಗಳು ನಡೆದಾಗಲೂ ಅದನ್ನು ಸರಕಾರಕ್ಕೆ ತಲುಪಿಸುವಂತಹ ಕೆಲಸ ನಡೆದರೂ ರಾಜ್ಯದ ಗೃಹ ಇಲಾಖೆ ಈ ಬಗ್ಗೆ ಗಮನಹರಿಸಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಗಳು ಒಂದೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಇನಾಯತ್ ಅಲಿ, ಇನ್ನಾದರೂ ಕರಾವಳಿಯ ಈ ನೆತ್ತರ ರಾಜಕೀಯ ಕೊನೆಯಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.

ಸರಕಾರ ದ್ವೇಷ ಭಾಷಣಕಾರರು ಮತ್ತು ಕೋಮು ಪ್ರಚೋದನೆ ಮಾಡುವ ದುಷ್ಟಶಕ್ತಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಿ ಇಲ್ಲಿನ ಜನರಿಗೆ ಮಿಕ್ಕ ಎಲ್ಲಾ ಗ್ಯಾರಂಟಿಗಳಿಗಿಂತ ಹೊರತಾಗಿ ಮೊದಲು ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ಗ್ಯಾರಂಟಿಯನ್ನು, ಶಾಂತಿಯುತ ವಾತಾವರಣವನ್ನು ನಿರ್ಮಿಸಿ ಕೊಡಬೇಕು. ಈ ಕೊಲೆ ಕೃತ್ಯಗಳ ಮೂಲ ಪತ್ತೆ ಹಚ್ಚಿ, ಅದಕ್ಕೆ ಕುಮ್ಮಕ್ಕು ನೀಡುವಂತಹ ಶಕ್ತಿಗಳ ಬಗ್ಗೆ ನಿಷ್ಪಕ್ಷ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ಆಗಬೇಕು ಎಂದವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News