×
Ad

ಅಶ್ರಫ್ ಕಿನಾರ ಮೇಲೆ ಪ್ರಕರಣ ದಾಖಲು: ಉಲಮಾ ಕೋ ಆರ್ಡಿನೇಷನ್ ಖಂಡನೆ

Update: 2025-06-08 15:12 IST

ಅಶ್ರಫ್ ಕಿನಾರ

ಮಂಗಳೂರು: ಸರಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ, ಸುನ್ನೀ ಸಂಘಟಕ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಕಿನಾರಾ ಮೇಲೆ ಕೇಸು ದಾಖಲಿಸಿರುವುದನ್ನು ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ತೀವ್ರವಾಗಿ ಖಂಡಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ ಮತ್ತು ಸರಕಾರದ ನಡೆಯನ್ನು ಪ್ರಶ್ನಿಸುವ ವಾಟ್ಸ್ ಆ್ಯಪ್ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯಮಂತ್ರಿಯನ್ನೋ, ವಿಧಾನ ಸಭಾಧ್ಯಕ್ಷರನ್ನೋ ಉಲ್ಲೇಖಿಸಿಲ್ಲ. ಆದಾಗ್ಯೂ ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರನ್ನು ಅವಹೇಳನ ಮಾಡಿದ ಆರೋಪ ಹೊರಿಸಲಾಗಿದೆ. ಇದರ ಹಿಂದೆ ಯಾವುದೋ ಷಡ್ಯಂತ್ರವಿದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕೂಲಂಕಷ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಉಲಮಾ ಕೋ ಆರ್ಡಿನೇಷನ್ ಆಗ್ರಹಿಸಿದೆ.

ಅಶ್ರಫ್ ಕಿನಾರ ಅವರು ಉಲಮಾ ಕೋ ಆರ್ಡಿನೇಷನ್ ಅಧೀನದಲ್ಲಿ ನಡೆದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನಾ ಸಮ್ಮೇಳನದ ಸಂಚಾಲಕ ಸೇರಿದಂತೆ ವಿವಿಧ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಂತಹವರ ಮೇಲೆ ಕ್ಷುಲ್ಲಕ ಆರೋಪ ಹೊರಿಸಿ ದುರ್ಬಲಗೊಳಿಸುವುದು ಸರಿಯಲ್ಲ. ಬಹಿರಂಗ ವೇದಿಕೆಗಳಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆಸಕ್ತಿ ತೋರದ ಪೊಲೀಸರು, ವಾಟ್ಸ್ ಆ್ಯಪ್ ಸಂದೇಶವೊಂದರ ಹಿಂದೆ ಬಿದ್ದು ಕೇಸ್ ದಾಖಲಿಸಿರುವುದು ಹಾಸ್ಯಾಸ್ಪದ. ತಕ್ಷಣ ಅವರ ಮೇಲಿನ ಕೇಸ್ ಹಿಂಪಡೆಯ ಬೇಕು ಎಂದು ಉಲಮಾ ಕೋ ಆರ್ಡಿನೇಷನ್ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಎಂ.ಶರೀಫ್ ಫೈಝಿ ಕಡಬ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News