ಪ್ರವಾಹ ಪೀಡಿತ ಪ್ರದೇಶದ ಶಾಶ್ವತ ಪರಿಹಾರಕ್ಕೆ ಕ್ರಮ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.
ಎಕ್ಕೂರು, ತೋಚಿಲ ಕಟ್ಟಪುಣಿ, ರಾಷ್ಟ್ರೀಯ ಹೆದ್ದಾರಿ ಬಳಿಯ ವೈದ್ಯನಾಥ ನಗರ, ಜಪ್ಪಿನಮೊಗರುವಿನ ಗಣೇಶ ನಗರ, ರಾಜಕಾಲುವೆ ಸೇರುವ ನೇತ್ರಾವತಿ ತೀರದ ಕಡೇಕಾರು ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಕಾಮತ್ ನೆರೆ ಪರಿಸ್ಥಿತಿಗೆ ಕಾರಣ, ತುರ್ತಾಗಿ ನಡೆಯಬೇಕಿರುವ ಕಾರ್ಯ, ಭವಿಷ್ಯದಲ್ಲಿ ಪ್ರವಾಹ ಮರುಕಳಿಸದಂತೆ ಪರಿಹಾರ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆದು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಕ್ಕೂರಿನ ಧ್ರುವ ರೆಸಿಡೆನ್ಸಿ ಸಮೀಪದ ರಾಜಕಾಲುವೆ ಬಳಿ ಇರುವ ಬೃಹತ್ ಖಾಸಗಿ ಕಾಂಪೌಂಡ್ ಕುಸಿದರೆ ಜಪ್ಪಿನಮೊಗರು, ಗಣೇಶನಗರ ಪರಿಸರ, ದೊಂಪದ ಬಲಿ, ಹೊಯ್ಗೆ ರಾಶಿ ಮುಳುಗಡೆಯಾಗ ಬಹುದು. ಇಲ್ಲಿನ ಗದ್ದೆ ಪ್ರದೇಶಗಳಲ್ಲೇ ಅತೀ ಹೆಚ್ಚು ಮನೆ ನಿರ್ಮಾಣಗೊಂಡಿರುವುದರಿಂದ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿ ಈ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಈ ಸಂದರ್ಭ ಕಾರ್ಯಪಾಲಕ ಇಂಜಿನಿಯರ್ ಹಾಗೂ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಶೆಣೈ, ಎಇಇ ರಾಜೇಶ್, ಸಣ್ಣ ನೀರಾವರಿ ಇಲಾಖೆಯ ರಾಕೇಶ್, ಪಿಡಬ್ಲ್ಯೂಡಿ ಇಂಜಿನಿಯರ್ ಸೂರಜ್, ಗ್ರಾಮ ಲೆಕ್ಕಾಧಿಕಾರಿ ರೂಪಾ, ಬಿಜೆಪಿಯ ಪ್ರಮುಖರಾದ ವೀಣಾ ಮಂಗಳ, ಭರತ್ ಕುಮಾರ್, ಕಿರಣ್ ರೈ, ಸುರೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.