×
Ad

ಕ್ರಾಂತಿಕಾರಿ ನಾಯಕ ಚೆಗುವೆರಾ ಇಂದಿಗೂ ಅಜರಾಮರ: ಮುನೀರ್ ಕಾಟಿಪಳ್ಳ

Update: 2025-06-16 21:59 IST

ಮಂಗಳೂರು, ಜೂ.16: ಕ್ರಾಂತಿಕಾರಿ ನಾಯಕ ಚೆಗುವೆರಾ ಇಂದಿಗೂ ಅಜರಾಮರ. ಯಾರನ್ನೂ ನಾವು ಆರಾಧನೆ ಮಾಡಲು ಹೇಳಲಾರೆವು. ಆದರೆ ಚೆಗುವೆರಾ ಅವರ ಮಾನವೀಯ ಚಿಂತನೆ, ಸಾಮ್ರಾಜ್ಯಶಾಹಿ ವಿರೋಧ ಧೋರಣೆಗಳನ್ನು ನಾವು ಮೈಗೂಡಿಸಿ ಕೆಲಸ ಮಾಡಬೇಕು ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಲು ಒತ್ತಾಯಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಮಟ್ಟದ ಯುವಜನರ ಸಂಘಟನಾ ಕಾರ್ಯಾಗಾರವು ಶಕ್ತಿನಗರದ ಕಲಾಂಗಣ್ ಸಭಾಂಗಣದಲ್ಲಿ ಸೋಮವಾರ ನಡೆದ ಸಮರೋಪ ಕಾರ್ಯಕ್ರಮದಲ್ಲಿ ನಡೆಯಿತು.

ಮುಸ್ಲಿಂ ಸಮುದಾಯ ಇಸ್ರೇಲನ್ನು ವಿರೋಧಿಸುತ್ತಿದೆ ಎಂಬದು ಬಲಪಂಥೀಯರ ಇಸ್ರೇಲ್ ಪ್ರೀತಿಗೆ ಕಾರಣ. ನಾವು ಯಾಕೆ ಇಸ್ರೇಲನ್ನು ವಿರೋಧ ಮಾಡಬೇಕು ಮತ್ತು ಅಮೆರಿಕದ ಧೋರಣೆಯ ವಿರೋಧ ನಿಲ್ಲಬೇಕು ಎಂಬ ಸೈದ್ಧಾಂತಿಕ ತಿಳುವಳಿಕೆ ಮುಸ್ಲಿಮರಿಗೂ ಅರಿವಿರಬೇಕು. ಭಾರತದಂತಹ ಅಭಿವೃದ್ಧಿಶೀಲ ದೇಶದ ಜನಸಮೂಹಕ್ಕೂ ಅರಿವಿರಬೇಕು. ಸಾಮ್ರಾಜ್ಯಶಾಹಿ ಶಕ್ತಿಗಳ ಹುನ್ನಾರವನ್ನು ಅರಿಯದೆ ಇಸ್ರೇಲ್, ಪ್ಯಾಲೆಸ್ತೀನ್ ಸಂಘರ್ಷವನ್ನು ಧರ್ಮದ ಆಧಾರದಲ್ಲಿ ನೋಡುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಕಾರ್ಪೊರೇಟ್ ಬಂಡವಾಳ ಬೆಂಬಲಿತ ಸಾಮ್ರಾಜ್ಯಶಾಹಿ ಶಕ್ತಿಗಳ ಕುರಿತು ಸರಿ ಯಾದ ತಿಳುವಳಿಕೆ ಯುವಜನರು ಹೊಂದಿರಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಕೋಮುವಾದದ ವಿರುದ್ಧ ಮಾತನಾಡಿದ ಮಾತ್ರಕ್ಕೆ ನಾವು ಕೋಮುವಾದವನ್ನು ಕುರುಡಾಗಿ ವಿರೋಧಿಸು ತ್ತಿದ್ದೇವೆ ಎಂದಲ್ಲ. ನಾವು ದ್ವೇಷ ಹರಡುವ ಕೋಮುವಾದದ ಆಳ-ಅಗಲ ಅರ್ಥೈಸಿಕೊಳ್ಳಲು ಸಾಧ್ಯವಾಗ ಬೇಕು. ಸಮಾಜ ಒಡೆಯುವ ಕೋಮುವಾದದ ಅಪಾಯವನ್ನು ಅರಿತು ದೃಢವಾಗಿ ವಿರೋಧಿಸಬೇಕು. ದಮನಿತ ಸಮುದಾಯಗಳಲ್ಲಿ, ಯುವಜನರಲ್ಲಿ ಕೋಮುವಾದದ ಅಪಾಯಗಳ ಕುರಿತು ಎಚ್ಚರ ಮೂಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪದಾಧಿಕಾರಿ ಗಳಾದ ನಿತಿನ್ ಕುತ್ತಾರ್, ಮಾಧುರಿ ಬೋಳಾರ್ ಉಪಸ್ಥಿತರಿದ್ದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News