×
Ad

ಪುತ್ತೂರು | ಬಾಡಿಗೆಗೆಂದು ತೆಗೆದುಕೊಂಡು ಹೋಗಿ ಲಾರಿಯನ್ನೇ ಅಡವಿಟ್ಟ ಚಾಲಕ!

Update: 2025-06-17 21:59 IST

ಸಾಂದರ್ಭಿಕ ಚಿತ್ರ

ಪುತ್ತೂರು: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕನೇ ಅಡವಿಟ್ಟು ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವುದಾಗಿ ಸೋಮವಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್ ಎಂ. ಎಂಬವರು ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ಕಿರಣ್ ಪ್ರಕರಣದ ಆರೋಪಿಗಳು ಎಂದು ತಿಳಿದುಬಂದಿದೆ.

ಫರ್ವೀಝ್ ಅವರು ನೀಡಿರುವ ದೂರಿನಲ್ಲಿ ತಮ್ಮ ಮಾಲಕತ್ವದ ಲಾರಿಗೆ (KA 28 AB 0643) ಅಸಾಸುದ್ದೀನ್ ಫೈರೋಝ್ ನನ್ನು ಚಾಲಕನಾಗಿ ನೇಮಿಸಿದ್ದು, ಮಾ.29ರಂದು ಸರಕು ಸಾಗಾಟದ ಉದ್ದೇಶಕ್ಕಾಗಿ ಲಾರಿಯನ್ನು ಪಡೆದ ಆತ ಬಳಿಕ ಲಾರಿಯನ್ನಾಗಲೀ, ಬಾಡಿಗೆ ಹಣವನ್ನಾಗಲೀ ಹಿಂದಿರುಗಿಸಿಲ್ಲ. ಈ ಬಗ್ಗೆ ತಾನು ವಿಚಾರಿಸಿದಾಗ, ಲಾರಿ ಕೆಟ್ಟು ಹೋಗಿದೆ. ರಿಪೇರಿ ಮಾಡಿಸುತ್ತಿದ್ದೇನೆ' ಎಂದು ಸುಳ್ಳು ಹೇಳಿದ್ದು, ದಿನಗಳು ಕಳೆದರೂ ಲಾರಿ ಹಿಂತಿರುಗಿಸದ ಕಾರಣ ಅನುಮಾನಗೊಂಡು ಮತ್ತೆ ಪ್ರಶ್ನಿಸಿದಾಗ, ಲಾರಿಯನ್ನು ಮಂಗಳೂರಿನ ನೀರುಮಾರ್ಗದಲ್ಲಿರುವ ಕಿರಣ್ @ ನೆಸ್ಸೆ ಕಿರಣ್‌ ಎಂಬಾತನಿಗೆ ಅಡವಿಟ್ಟಿರುವುದಾಗಿ ಉತ್ತರಿಸಿದ್ದಾನೆ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ಚಾಲಕನ ಮಾಹಿತಿ ಮೇರೆಗೆ, ಫರ್ವೀಝ್ ಅವರು ವಾಹನಕ್ಕೆ ಸಾಲ ನೀಡಿದ ಹಣಕಾಸು ಸಂಸ್ಥೆಯವರೊಂದಿಗೆ ಎ.3 ರಂದು ನೀರುಮಾರ್ಗದ ಕಿರಣ್‌ನನ್ನು ಭೇಟಿಯಾಗಿ ವಿಚಾರಿಸಿದ್ದಾರೆ. ಈ ವೇಳೆ, "ಲಾರಿ ನನ್ನ ಬಳಿಯೇ ಇದೆ. ಇದರ ಸಲುವಾಗಿ ಇಲ್ಲಿಗೆ ಬಂದರೆ ನೀವು ಜೀವಸಹಿತ ವಾಪಸ್‌ ಹೋಗುವುದಿಲ್ಲ. ಮರ್ಯಾದೆಯಿಂದ ಹೋಗಿ” ಎಂದು ಕಿರಣ್‌ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಲಾರಿಗೆ ಸಾಲ ನೀಡಿದ ಸಂಸ್ಥೆಯೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಜೂ. 16 ರಂದು ಭಾರತೀಯ ನ್ಯಾಯ ಸಂಹಿತೆ (BNS 2023) 316(4), 318(2), 352, 351(3), 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News