×
Ad

ಉಪ್ಪಿನಂಗಡಿ: ನದಿಗಳಲ್ಲಿ ನೀರಿನ ಮಟ್ಟ ಮತ್ತೆ ಹೆಚ್ಚಳ

Update: 2025-06-17 22:02 IST

ಉಪ್ಪಿನಂಗಡಿ: ಇಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿಯಲ್ಲಿ ನೀರು ಮತ್ತೆ ಹೆಚ್ಚಳವಾಗಿದ್ದು, ಮಂಗಳವಾರ ಸಂಜೆಯ ಹೊತ್ತಿಗೆ ಎರಡೂ ನದಿಗಳು ಮೈತುಂಬಿ ಹರಿಯಲಾರಂಭಿಸಿವೆ.

ಉಪ್ಪಿನಂಗಡಿಯಲ್ಲಿ ಭಾನುವಾರ 8 ಸೆ.ಮೀ., ಸೋಮವಾರ-17 ಸೆ.ಮೀ. ಮಂಗಳವಾರ 10 ಸೆ.ಮೀ. ಮಳೆ ಸುರಿದಿರುವುದು ದಾಖಲಾಗಿದ್ದು, ಭಾನುವಾರ ಬೆಳಗ್ಗಿನಿಂದಲೇ ಒಂದೇ ಸವನೆ ಮಳೆ ಸುರಿಯು ತ್ತಿದ್ದು, ನಟ್ಟಿಬೈಲ್, ಕುರ್ಪೆಲು, ನೆಕ್ಕಿಲಾಡಿ, ಕೂಟೇಲು, ದಡ್ಡು ಮೊದಲಾದ ಕಡೆಯ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ರವಿವಾರ ತಡ ರಾತ್ರಿಯ ತನಕ ನದಿ ಸಮುದ್ರ ಮಟ್ಟಕ್ಕಿಂತ 27.5 ಮೀಟರ್ ಎತ್ತರದಲ್ಲಿ ಹರಿಯು ತ್ತಿದ್ದುದು, ಸೋಮವಾರ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿತ್ತು. ಮಂಗಳವಾರ ಬೆಳಗ್ಗಿನಿಂದ ಮತ್ತೆ ಏರಿಕೆ ಆಗತೊಡಗಿ ಮಂಗಳವಾರ ಸಂಜೆಯ ಹೊತ್ತಿಗೆ ನದಿ ಸಮುದ್ರ ಮಟ್ಟದಿಂದ 27.8 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದುದು ಕಂಡು ಬಂದಿದೆ. ನೇತ್ರಾವತಿಗಿಂತ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಬಳಿಯ ಸಂಗಮ ಕ್ಷೇತ್ರದ ಸ್ಥಾನಘಟ್ಟದ 36 ಮೆಟ್ಟಲುಗಳ ಪೈಕಿ 23 ಮೆಟ್ಟಲು ಮುಳುಗಡೆಯಾಗಿದೆ. 13 ಮೆಟ್ಟಲು ಕಾಣುತ್ತಿವೆ.

ನದಿಯಲ್ಲಿ ನೀರಿನ ಮಟ್ಟ ದಿನೇ ದಿನೇ ಜಾಸ್ತಿಯಾಗುತ್ತಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಕಂದಾಯ ಇಲಾಖೆಯ ಸಿಬ್ಬಂದಿಯು ತುರ್ತು ಸಂದರ್ಭವನ್ನೆದುರಿಸಲು ಸನ್ನದ್ಧರಾಗಿ ಕೇಂದ್ರ ಸ್ಥಾನದಲ್ಲಿ ಮೊಕ್ಕಾಂ ಇರುವುದಾಗಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ತಿಳಿಸಿದ್ದಾರೆ. ನೇತ್ರಾವತಿ, ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಮೊಕ್ಕಾಂ ಹೂಡಿದ್ದು, ಸಂಭವನೀಯ ಸಮಸ್ಯೆಗಳನ್ನು ಎದುರಿಸಲು ಸನ್ನದ್ದವಾಗಿ ನಿಂತಿದೆ ಗೃಹ ರಕ್ಷಕ ದಳದ ದಿನೇಶ್ ತಿಳಿಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News