×
Ad

ಮಂಗಳೂರು ಮನಪಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸಭೆ

Update: 2025-06-23 22:33 IST

ಮಂಗಳೂರು, ಜೂ.23: ಮಂಗಳೂರು ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ಜೆಪ್ಪು ಮಹಾ ಕಾಳಿಪಡ್ಪುವಿನಲ್ಲಿ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದೆ. 32 ಮನೆಗಳಲ್ಲಿ 9 ಮನೆಗಳು ಅಂತಿಮ ಹಂತದಲ್ಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.

ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರು ಮಹಾನಗರಪಾಲಿಕೆ ಕಚೇರಿಗೆ ಭೇಟಿ ನೀಡಿ ನಾನಾ ವಿಭಾಗ ಪರಿಶೀಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾಧ್ಯಮಕ್ಕೆ ವಿವರ ನೀಡಿದರು.

ಪೌರಕಾರ್ಮಿಕರ ವಸತಿ ಸಂಕೀರ್ಣದಲ್ಲಿ ಎರಡನೇ ಹಂತದಲ್ಲಿ ಮತ್ತೆ 32 ಮನೆಗಳನ್ನು ನಿರ್ಮಿಸಲಾಗು ವುದು. ಕೃತಕ ನೆರೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳ ಜತೆ ಮಾತು ಕತೆ ಹಾಗೂ ಪಾಲಿಕೆಯ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇಂಟಿಗ್ರೇಟೆಡ್ ಕಂಟ್ರೋಲ್ ಆ್ಯಂಡ್ ಕಮಾಂಡ್ ಘಟಕವು ಯಾವ ರೀತಿ ಕೆಲಸ ಮಾಡುತ್ತಿದೆ. ದೂರುಗಳು ಯಾವ ರೀತಿ ನೋಂದಣಿ ಯಾಗುತ್ತಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರತಿನಿತ್ಯದ ದೂರು ಮತ್ತು ಪರಿಹಾರಗಳ ಬಗ್ಗೆ ದಾಖಲೀಕರಣ ಮಾಡಲು ಸೂಚಿಸಲಾಗಿದೆ. ಪ್ರತಿ ವಾರವೂ ಮನಪಾ ಕಮಿಷನರ್ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಕುಡಿಯುವ ನೀರಿನ ಸರಬರಾಜು, ಜಾಕ್‌ವೆಲ್ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ನಗರದಲ್ಲಿ 60 ಸಾವಿರ ಎಲ್‌ಇಡಿ ದೀಪ ಅಳವಡಿಕೆಗೆ ಪಿಪಿಪಿ ಮಾದರಿಯಲ್ಲಿ ಕ್ರಮವಹಿಸಲಾಗಿದೆ. ಇದರಲ್ಲಿ 20 ಸಾವಿರ ಅಳವಡಿಕೆ ಮಾಡಲಾಗಿದೆ. ಇನ್ನುಳಿದ 40 ಸಾವಿರ ಎಲ್‌ಇಡಿ ತ್ವರಿತಗತಿಯಲ್ಲಿ ಮುಗಿಸಲು ನಿರ್ದೇಶನ ನೀಡಲಾಗಿದೆ ಎಂದು ಡಿಸಿ ಹೇಳಿದರು.

ಲೋಕಾಯುಕ್ತ ದಾಳಿಯ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಲೋಕಾಯುಕ್ತ ಎಸ್ಪಿ ಅಥವಾ ಯಾವುದೇ ಅಧಿಕಾರಿಗಳು ನನಗೆ ಮಾಹಿತಿ ನೀಡಿಲ್ಲ. ಹಾಗಾಗಿ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮಂಗಳೂರು ಸ್ವಚ್ಛ ನಗರವಾಗಿದೆ. ಅದರ ಸೌಂದರ್ಯಕ್ಕೆ ಧಕ್ಕೆಯಾಗಬಾರದು. ನಗರದ ಬ್ಲ್ಯಾಕ್ ಸ್ಪಾಟ್ ಮತ್ತು ಸ್ವಚ್ಛತೆಯ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.

ಹೊಸದಾಗಿ ನೇಮಕವಾಗಿ ಪೌರ ಕಾರ್ಮಿಕರು, ಸಿಬ್ಬಂದಿಯ ಜತೆ ಪ್ರತ್ಯೇಕವಾಗಿ ಸಭೆ ನಡೆಸಲಾಗು ವುದು. ಆರೋಗ್ಯ ವಿಭಾಗದ ಸ್ವಚ್ಛತೆಗೆ ಸಂಬಂಧಿಸಿ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ಈ ಸಂದರ್ಭ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News